ಅಹಮದಾಬಾದ್, ಗುಜರಾತ್:ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕ್ ನಡುವಿನ ಕದನಕ್ಕೆ ಕಾಲ ಕೂಡಿ ಬಂದಿದೆ. ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿರುವ ಭಾರತ - ಪಾಕಿಸ್ತಾನ ಪಂದ್ಯ ನಾಳೆ ಅಹಮದಾಬಾದ್ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಏಕದಿನ ವಿಶ್ವಕಪ್‌ನಲ್ಲಿ ಏಳು ಬಾರಿ (1992, 1996, 1999, 2003, 2011, 2015, 2019) ಮುಖಾಮುಖಿಯಾಗಿವೆ. ಈ ಏಳು ಬಾರಿಯೂ ಭಾರತ ದಾಯಾದಿ ಮೇಲೆ ಇನ್ನಿಲ್ಲದ ಪ್ರಾಬಲ್ಯ ಸಾಧಿಸಿ ಗೆಲುವು ಸಾಧಿಸಿರುವುದು ಗೊತ್ತಿರುವ ಸಂಗತಿ.
ಸಿಡ್ನಿಯಲ್ಲಿ ಮೊದಲ ಕದನ:ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ 1992 ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್‌ಗಳ ಜಯ ಸಾಧಿಸಿದೆ. ಭಾರತ ನಿಗದಿತ 49 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಅಜಯ್ ಜಡೇಜಾ (46) ರನ್ ಗಳಿಸಿ ಮಿಂಚಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸಚಿನ್ ತೆಂಡೂಲ್ಕರ್ (54*) ಅರ್ಧಶತಕ ಬಾರಿಸಿದ್ದರು. ಕಪಿಲ್ ದೇವ್ 35 ರನ್ ಗಳಿಸಿದರು. ಇನ್ನು ಭಾರತ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 173 ರನ್‌ಗಳಿಗೆ ಆಲೌಟ್ ಆಗಿತ್ತು. ಅಮೀರ್ ಸೋಹೆಲ್ (62) ಮತ್ತು ಜಾವೇದ್ ಮಿಯಾಂದಾದ್ (40) ಹೊರತುಪಡಿಸಿ ಉಳಿದ ಆಟಗಾರರು ಕಡಿಮೆ ಸ್ಕೋರ್‌ಗೆ ಪೆವಿಲಿಯನ್ ದಾರಿ ಹಿಡಿದಿದ್ದರು. ಕಪಿಲ್ ದೇವ್, ಮನೋಜ್ ಪ್ರಭಾಕರ್ ಮತ್ತು ಜಾವಗಲ್ ಶ್ರೀನಾಥ್ ಎರಡು ವಿಕೆಟ್ ಪಡೆದರೆ, ಸಚಿನ್ ಮತ್ತು ವೆಂಕಟಪತಿರಾಜು ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು.
ಬೆಂಗಳೂರಿನಲ್ಲಿ ಭರ್ಜರಿ ಗೆಲುವು:1996ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ನಡೆದಿತ್ತು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ ನವಜೋತ್ ಸಿಂಗ್ ಸಿಧು 93 ಗಳಿಸಿ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಅಜಯ್ ಜಡೇಜಾ 45 ರನ್ಗಳಿಸಿ ಆಕ್ರಮಣಕಾರಿ ಆಟವಾಡಿದ್ದರು. ಒಟ್ನಲ್ಲಿ ಭಾರತ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಭಾರತ ನೀಡಿದ್ದ ಟಾರ್ಗೆಟ್ ಅನ್ನು ಬೆನ್ನಟ್ಟಿದ್ದ ಪಾಕಿಸ್ತಾನ ವೆಂಕಟೇಶ್ ಪ್ರಸಾದ್ (3/45) ಹಾಗೂ ಅನಿಲ್ ಕುಂಬ್ಳೆ (3/48) ಅವರ ಮಾರಕ ದಾಳಿಗೆ ತತ್ತರಿಸಿ ಹೋಗಿತ್ತು. ನಿಗದಿ ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಪಾಕಿಸ್ತಾನ 248 ರನ್ ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ 39 ರನ್‌ಗಳ ಜಯ ಒಲಿದಿತ್ತು.
ಮ್ಯಾಂಚೆಸ್ಟರ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೆಲುವು:1999ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮೂರನೇ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳಿಂದ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ಸಚಿನ್ (45), ರಾಹುಲ್ ದ್ರಾವಿಡ್ (61) ಮತ್ತು ಅಜರುದ್ದೀನ್ (59) ಅವರ ಅಮೋಘ ಪ್ರದರ್ಶನದಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಭಾರತದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ (5/27) ಅವರ ಬೌಲಿಂಗ್ ಮ್ಯಾಜಿಕ್ಗೆ ತತ್ತರಿಸಿದ ಪಾಕಿಸ್ತಾನ ತಂಡ 180 ರನ್‌ಗಳಿಗೆ ಆಲೌಟ್ ಆಯಿತು. ಶ್ರೀನಾಥ್ (3/37) ಮತ್ತು ಅನಿಲ್ ಕುಂಬ್ಳೆ (2/43) ಕೂಡ ಈ ಪಂದ್ಯದಲ್ಲಿ ಮಿಂಚಿದ್ದರು.
ಗೆಲುವಿನ ಓಟ ಮುಂದುವರಿಸಿದ ಭಾರತ: 2003ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತು. ಸಯೀದ್ ಅನ್ವರ್ (101) ಶತಕ ಬಾರಿಸಿದ್ದರು. ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆ ಬಳಿಕ 274 ರನ್‌ಗಳ ಗುರಿಯನ್ನು ಭಾರತ 26 ಎಸೆತಗಳು ಬಾಕಿ ಇರುವಂತೆಯೇ ಪೂರ್ಣಗೊಳಿಸಿ ಜಯಭೇರಿ ಬಾರಿಸಿತು. ಸಚಿನ್ ತೆಂಡೂಲ್ಕರ್ 98 ರನ್ ಗಳಿಸಿ ಶತಕ ವಂಚಿತರಾದರು. ಯುವರಾಜ್ ಸಿಂಗ್ (50; 53 ಎಸೆತ) ಅರ್ಧಶತಕ ಗಳಿಸಿದರು. ರಾಹುಲ್ ದ್ರಾವಿಡ್ 44 ರನ್ ಮತ್ತು ಮೊಹಮ್ಮದ್ ಕೈಫ್ 35 ರನ್ ಗಳಿಸಿ ಮಿಂಚಿದ್ದರು.
2011ರಲ್ಲೂ ಪಾಕ್ ಮಣಿಸಿದ್ದ ಭಾರತ: 2007ರ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಭಾರತ ಹೊರಬಿದ್ದಿದ್ದು ಗೊತ್ತೇ ಇದೆ. ಆ ಸೀಸನ್ನಲ್ಲಿ ಸೋದರ ಸಂಬಂಧಿಗಳ ನಡುವೆ ಯಾವುದೇ ಪಂದ್ಯ ಇರಲಿಲ್ಲ. 2011ರಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಿದ್ದವು. ಮೊಹಾಲಿಯಲ್ಲಿ ನಡೆದ ಸೆಮಿಸ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ 49.5 ಓವರ್‌ಗಳಲ್ಲಿ 231 ರನ್‌ಗಳಿಗೆ ಆಲೌಟಾಯಿತು. ಮಿಸ್ಬಾ ಉಲ್ ಹಕ್ (56) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮೊಹಮ್ಮದ್ ಹಫೀಜ್ 43 ರನ್ ಗಳಿಸಿದ್ದರು. ಭಾರತದ ಬೌಲರ್‌ಗಳಲ್ಲಿ ಜಹೀರ್ ಖಾನ್, ಆಶಿಶ್ ನೆಹ್ರಾ, ಮುನಾಫ್ ಪಟೇಲ್, ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ತಲಾ ಎರಡು ವಿಕೆಟ್ಗಳು ಪಡೆದು ಮಿಂಚಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಗೆದ್ದು ಎರಡನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು.
ಅಡಿಲೇಡ್‌ನಲ್ಲಿ ಭಾರತಕ್ಕೆ ಒಲಿದ ಜಯ:ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಆರನೇ ಪಂದ್ಯ 2015 ರಲ್ಲಿ ನಡೆದಿತ್ತು. ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 76 ರನ್‌ಗಳ ಜಯ ದಾಖಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತು. ವಿರಾಟ್ ಕೊಹ್ಲಿ 107 ರನ್ಗಳನ್ನು ಗಳಿಸುವ ಮೂಲಕ ಶತಕ ಬಾರಿಸಿದ್ದರು. ಶಿಖರ್ ಧವನ್ 73 ರನ್ ಮತ್ತು ಸುರೇಶ್ ರೈನಾ 74 ರನ್ ಗಳಿಸಿ ಪ್ರಮುಖ ಇನಿಂಗ್ಸ್ ಆಡಿದ್ದರು. ಈ ಬೃಹತ್ ಗುರಿಯಲ್ಲಿ ಪಾಕಿಸ್ತಾನ 47 ಓವರ್‌ಗಳಲ್ಲಿ 224 ರನ್‌ಗಳಿಗೆ ಕುಸಿದಿತ್ತು. ಶಮಿ (4/35) ಪಾಕಿಸ್ತಾನದ ಪತನಕ್ಕೆ ಕಾರಣರಾದರು. ಮೋಹಿತ್ ಶರ್ಮಾ ಮತ್ತು ಉಮೇಶ್ ಯಾದವ್ ಎರಡು ವಿಕೆಟ್ ಪಡೆದರು. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಭಾರತಕ್ಕೆ ಏಳನೇ ಗೆಲುವು:2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 140 ರನ್ಗಳನ್ನು ಕಲೆ ಹಾಕುವ ಮೂಲಕ ಆಕರ್ಷಕ ಶತಕ ಸಿಡಿಸಿದ್ದರು. ಕೊಹ್ಲಿ 77 ರನ್ ಗಳಿಸಿ ಮಿಂಚಿದ್ದರು. ಇದರೊಂದಿಗೆ ಭಾರತ 336/5 ಬೃಹತ್ ಸ್ಕೋರ್ ದಾಖಲಿಸಿತು. ಭಾರತ ನೀಡಿದ್ದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ 40 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತ್ತು. ನಂತರ ಮಳೆಯಿಂದಾಗಿ ಆಟ ಮುಂದುವರಿಯಲಿಲ್ಲ. ಡಕ್‌ವರ್ತ್ ಲೂಯಿಸ್ ಪ್ರಕಾರ ಭಾರತ 89 ರನ್‌ಗಳ ಜಯ ಸಾಧಿಸಿತು.
ಓದಿ:ಬುಮ್ರಾ - ಶಾಹೀನ್ ಮಧ್ಯೆ ಹೆಚ್ಚಿದ ಪೈಪೋಟಿ, ಇಬ್ಬರಲ್ಲಿ ಯಾರು ಹೆಚ್ಚು ಅಪಾಯಕಾರಿ?