ಅಹಮದಾಬಾದ್, ಗುಜರಾತ್: ಇಂದು ODI ವಿಶ್ವಕಪ್‌ನಲ್ಲಿ ಕ್ರಿಕೆಟ್ ಹಬ್ಬ. ಭಾರತ vs ಪಾಕಿಸ್ತಾನ ಪಂದ್ಯವು ಅಹಮದಾಬಾದ್ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ. ಆದ್ರೆ ಅಂತಿಮ ತಂಡದ ಆಯ್ಕೆಯ ಬಗ್ಗೆ ಎಲ್ಲರೂ ಇನ್ನೂ ಉತ್ಸುಕರಾಗಿದ್ದಾರೆ. ಯಾರನ್ನು ತೆಗೆದುಕೊಳ್ಳಲಾಗುವುದು.. ಯಾರನ್ನು ಬಿಡಲಾಗುವುದು.. ಎಂಬುದು ಆಸಕ್ತಿಕರ ವಿಷಯವಾಗಿದೆ. ಪಾಕಿಸ್ತಾನದ ವೇಗವನ್ನು ಎದುರಿಸಲು ಬ್ಯಾಟಿಂಗ್ ಬಲವಾಗಿರಬೇಕು. ಅವರು ತೀಕ್ಷ್ಣವಾದ ಬೌಲಿಂಗ್ನೊಂದಿಗೆ ಕಣಕ್ಕಿಳಿಯುತ್ತಾರೆ. ಅಂತಿಮ ತಂಡದಲ್ಲಿ ಬಹುತೇಕ ಎಲ್ಲ ಸ್ಥಾನಗಳು ಓಕೆಯಾದರೂ ನಾಯಕ ರೋಹಿತ್ ಶರ್ಮಾ ಈಗಾಗಲೇ ಒಂದೋ ಅಥವಾ ಎರಡೋ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ.
ಕಣಕ್ಕಿಳಿಯಲಿದ್ದಾರಾ ಶುಭ್ಮನ್ ಗಿಲ್?: ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶುಭ್ಮನ್ ಗಿಲ್ ಇದೀಗ ಪಾಕಿಸ್ತಾನದ ವಿರುದ್ಧ ಆಡಲು ಸಜ್ಜಾಗಿರುವಂತೆ ಕಾಣುತ್ತಿದೆ. ಡೆಂಘಿಯಿಂದ ಚೇತರಿಸಿಕೊಂಡ ನಂತರ ಅಭ್ಯಾಸದಲ್ಲಿ ಗಿಲ್ ತೊಡಗಿರುವ ವಿಚಾರ ಗೊತ್ತೇ ಇದೆ. ಆದರೆ ಗಿಲ್ ಆಡಬಾರದು ಎಂದು ಮ್ಯಾನೇಜ್ ಮೆಂಟ್ ಭಾವಿಸಿದರೆ ಇಶಾನ್ ಕಿಶನ್ಗೆ ಮತ್ತೊಂದು ಅವಕಾಶ ಸಿಗಲಿದೆ. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಇಶಾನ್‌ಗೆ ಪ್ರದರ್ಶನ ಅಷ್ಟಕಷ್ಟೆ ಇತ್ತು. ಹಾಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಓಪನರ್ ಆಗಿ ಕರೆತಂದರೂ ಆಶ್ಚರ್ಯವಿಲ್ಲ. ಪವರ್ ಪ್ಲೇನಲ್ಲಿ ಬಿಗ್ ಶಾಟ್ಗಳನ್ನು ಬಾರಿಸಬಲ್ಲ ಹಾಗೂ ಅಮೋಘ ವೇಗದಲ್ಲಿ ಆಡಬಲ್ಲ ಸೂರ್ಯ ಸೆಟ್ಟರ್ ಆಗಲಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಆದರೆ, ನಿರ್ಣಾಯಕ ಕದನದಲ್ಲಿ ಭಾರತ ಪ್ರಯೋಗಗಳಿಗೆ ಮುಂದಾಗುವುದೇ.. ಎಂಬ ಅನುಮಾನವೂ ಮೂಡಿದೆ.
ಭಾರತ ತಂಡದ ಮಧ್ಯಮ ಕ್ರಮಾಂಕ ಹೇಗಿದೆ?:ಭಾರತದ ಅಗ್ರ ಕ್ರಮಾಂಕದಲ್ಲಿ ಆರಂಭಿಕರನ್ನು ಹೊರತುಪಡಿಸಿ, ಒನ್ ಡೌನ್ ಮತ್ತು ಸೆಕೆಂಡ್ ಡೌನ್ ಬಹಳ ಮುಖ್ಯ. ಆದರೆ, ಈ ಎರಡು ಸ್ಥಾನಗಳಲ್ಲಿ ಟೀಂ ಇಂಡಿಯಾಗೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ. ಆ ಬಳಿಕ ಶ್ರೇಯಸ್ ಅಯ್ಯರ್ ಫಾರ್ಮ್ಗೆ ಮರಳಿರುವುದು ಟೀಂ ಇಂಡಿಯಾಕ್ಕೆ ಪ್ಲಸ್ ಆಗಿದೆ. ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ರವಿಚಂದ್ರನ್ ಅಶ್ವಿನ್ ಕೂಡ ಕೆಳ ಕ್ರಮಾಂಕದಲ್ಲಿ ಅಮೂಲ್ಯ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್‌ಮನ್‌ಗಳು. ಆದರೆ, ಶಾರ್ದೂಲ್ ಅಥವಾ ಅಶ್ವಿನ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಬಹುದು. ಪಿಚ್ ಸ್ಪಿನ್‌ಗೆ ಸೂಕ್ತವೆಂದು ಪರಿಗಣಿಸಿದರೆ, ನಿರ್ವಹಣೆ ಅಶ್ವಿನ್ ಕಡೆಗೆ ವಾಲುತ್ತದೆ.