ಮುಂಬೈ(ಮಹಾರಾಷ್ಟ್ರ):ಬಲಾಢ್ಯ ಆಸ್ಟ್ರೇಲಿಯಾ ಇಂದು ವಿಶ್ವಕಪ್ ಕ್ರಿಕೆಟ್‌ನ ಮತ್ತೊಂದು ಮಹತ್ವದ ಪಂದ್ಯಕ್ಕೆ ಅಣಿಯಾಗುತ್ತಿದೆ. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತು, ಸತತ ಐದು ಪಂದ್ಯಗಳನ್ನು ಗೆದ್ದಿರುವ ಆಸೀಸ್ ಪಾಯಿಂಟ್ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ. ಇಂದು ಅಫ್ಘಾನಿಸ್ತಾನದ ಸ್ಪಿನ್ ದಾಳಿಯನ್ನು ಹೇಗೆ ಎದುರಿಸುತ್ತದೆ ಎಂಬುದು ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದೆ.
ಅಫ್ಘಾನಿಸ್ತಾನದ ನಂತರ ಆಸೀಸ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಎರಡರ ಪೈಕಿ ಒಂದನ್ನು ಗೆದ್ದರೂ ಸೆಮಿ ಫೈನಲ್ಗೆ ಪ್ರವೇಶ ಪಕ್ಕಾ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧ ಜಯಿಸಿ ಸೆಮಿಸ್ಗೆ ಲಗ್ಗೆಯಿಡಲು ಆಸೀಸ್ ಹವಣಿಸುತ್ತಿದೆ.
ಸತತ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡರೂ ಆಸೀಸ್ ಮಧ್ಯಮ ಕ್ರಮಾಂಕದ ಪ್ರದರ್ಶನ ಅಷ್ಟೊಂದು ತೃಪ್ತಿಕರವಾಗಿರಲಿಲ್ಲ. ಮತ್ತೊಂದೆಡೆ, ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿರುವ ಅಫ್ಘಾನಿಸ್ತಾನ ಆಸ್ಟ್ರೇಲಿಯಾಕ್ಕೆ ಯಾವ ರೀತಿಯ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕು.
ಭಾರತ, ದಕ್ಷಿಣ ಆಫ್ರಿಕಾ ಸೋಲಿಸುವುದು ಕಷ್ಟ ಎಂದ ಸ್ಮಿತ್: ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸುವುದು ಕಷ್ಟ ಎಂದು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ. ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶ ಪಡೆಯುತ್ತೇವೆ. ಅಫ್ಘಾನಿಸ್ತಾನ ಹೋರಾಡುವ ತಂಡ. ವಿಶ್ವಕಪ್‌ನಲ್ಲಿ ಕೆಲವು ಉತ್ತಮ ತಂಡಗಳನ್ನು ಅವರು ಸೋಲಿಸಿದ್ದಾರೆ. ಟೂರ್ನಿಯಲ್ಲಿ ನಿರ್ಣಾಯಕ ಸಮಯದಲ್ಲಿ ನಾವು ಪುಟಿದೆದ್ದೆವು. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದರೂ ಸತತ ಗೆಲುವು ಸಾಧಿಸುತ್ತಿದ್ದೇವೆ. ಮುಂದೆ ದೊಡ್ಡ ಸವಾಲು ಎದುರಾಗಿದೆ ಎಂದರು.