ಮುಂಬೈ(ಮಹಾರಾಷ್ಟ್ರ):ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೆಮಿ ಫೈನಲ್ ಘಟ್ಟ ತಲುಪಿವೆ. ಟೀಂ ಇಂಡಿಯಾ ಲೀಗ್ ಹಂತದಲ್ಲಿ 8 ಪಂದ್ಯಗಳನ್ನಾಡಿದ್ದು, ಎಲ್ಲವನ್ನೂ ಗೆದ್ದು ಅಗ್ರಸ್ಥಾನದಲ್ಲಿದೆ. ಭಾರತಕ್ಕೆ ಸೆಮಿಸ್‌ನಲ್ಲಿ ಪ್ರತಿಸ್ಪರ್ಧಿ ಯಾರು? ಎಂಬುದು ಈಗಿನ ಕುತೂಹಲ. ಏಕೆಂದರೆ, ಇನ್ನೊಂದು ಸೆಮಿಫೈನಲ್ ಸ್ಥಾನಕ್ಕಾಗಿ ಮೂರು ತಂಡಗಳು ಪೈಪೋಟಿ ನಡೆಸುತ್ತಿವೆ.
ಅಫ್ಘಾನಿಸ್ತಾನ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಸೆಮಿಸ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ಸೆಮಿಸ್‌ನಲ್ಲಿ ಅವರು ಯಾವ ಸ್ಥಾನ ಅಲಂಕರಿಸುವರು ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ. 8 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಪಡೆದಿರುವ ಆಸ್ಟ್ರೇಲಿಯಾ ರನ್‌ರೇಟ್ ಆಧಾರದ ಮೇಲೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆಸೀಸ್ ತಂಡಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ನವೆಂಬರ್ 11ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ.
ನ್ಯೂಜಿಲೆಂಡ್‌ಗೆ ಸಂಕಷ್ಟ:ಕಿವೀಸ್ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಯತ್ತ ಸಾಗಿತ್ತು. ಆದರೆ ನಂತರ ದಿಢೀರ್ ಕುಸಿಯಿತು. ಸತತ ನಾಲ್ಕು ಪಂದ್ಯಗಳಲ್ಲಿ ಸೋಲುಂಡು ಇದೀಗ ಸೆಮಿಸ್‌ಗಾಗಿ ಸಾಕಷ್ಟು ಸೆಣಸಾಡಬೇಕಿದೆ. 8 ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ ಸೋಲುಗಳೊಂದಿಗೆ ಎಂಟು ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ನವೆಂಬರ್ 9ರಂದು ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಕೊನೆಯ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಸೆಮಿ ತಲುಪುವ ಭರವಸೆ ಕಡಿಮೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಮ್ಮ ಅಂತಿಮ ಪಂದ್ಯಗಳಲ್ಲಿ ಸೋತರೆ ಮಾತ್ರ ಕಿವೀಸ್ ನಾಕೌಟ್ ತಲುಪುತ್ತದೆ. ಒಂದು ವೇಳೆ ಕಿವೀಸ್ ಸೋಲನುಭವಿಸಿದರೆ ಸೆಮೀಸ್ ಭರವಸೆ ಕೈಬಿಡಬೇಕು. ನೆಟ್ ರನ್‌ರೇಟ್ ಪ್ರಕಾರ ಸೆಮಿಸ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.
ಪಾಕಿಸ್ತಾನಕ್ಕಿದೆ ಅವಕಾಶ: ಪಾಕಿಸ್ತಾನ ತಂಡಕ್ಕೆ ಸೆಮಿಸ್ ತಲುಪುವ ಅವಕಾಶ ಇನ್ನೂ ಇದೆ. ಇದುವರೆಗೆ 8 ಪಂದ್ಯಗಳಲ್ಲಿ 4 ಗೆಲುವು ಹಾಗೂ 4 ಸೋಲಿನೊಂದಿಗೆ 8 ಅಂಕ ಗಳಿಸಿ ಐದನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಕಿವೀಸ್ ವಿರುದ್ಧದ ಅಧಿಕಾರಯುತ ಜಯದೊಂದಿಗೆ ತಮ್ಮ ನೆಟ್ ರನ್‌ರೇಟ್ ಸುಧಾರಿಸಿದ್ದಾರೆ. ಪಾಕಿಸ್ತಾನ ಕೊನೆಯ ಪಂದ್ಯದಲ್ಲಿ (ನವೆಂಬರ್ 11) ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ವಿಶ್ವಕಪ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಅಂದುಕೊಂಡ ರೀತಿಯ ಫಾರ್ಮ್‌ನಲ್ಲಿಲ್ಲ. ಪಾಕ್ ಗೆಲುವಿನ ನಗೆ ಬೀರಿದರೆ ಸೆಮಿಸ್ಗೆ ತಲುಪುವುದು ಬಹುತೇಕ ಖಚಿತ. ಒಂದು ವೇಳೆ ಸೋತರೂ ಅವಕಾಶಗಳು ಕಡಿಮೆ. ಇತರ ತಂಡಗಳ ಫಲಿತಾಂಶಗಳು ಮತ್ತು ರನ್‌ರೇಟ್ ನಿರ್ಣಾಯಕವಾಗಲಿದೆ.