ಹೈದರಾಬಾದ್, ತೆಲಂಗಾಣ:ODI ವಿಶ್ವಕಪ್‌ನಲ್ಲಿ ಲೀಗ್ ಪಂದ್ಯಗಳು ಅಂತಿಮ ಹಂತವನ್ನು ಪ್ರವೇಶಿಸಿದೆ. ಭಾರತ ತಂಡ ಈಗಾಗಲೇ ಅಧಿಕೃತವಾಗಿ ಸೆಮಿಸ್ ಪ್ರವೇಶಿಸಿದೆ. ಈಗಾಗಲೇ ಬಾಂಗ್ಲಾದೇಶ ಟೂರ್ನಿಯಿಂದ ಹೊರ ಬಿದ್ದಿದೆ. ಇಂಗ್ಲೆಂಡ್, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಬಹುತೇಕ ಸೆಮಿಸ್ ರೇಸ್ನಿಂದ ಹೊರ ಬಿದ್ದಂತೆ. ಉಳಿದ ಮೂರು ಸ್ಥಾನಗಳಿಗಾಗಿ ಐದು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಆ ಐದು ತಂಡಗಳಲ್ಲಿ ಅಫ್ಘಾನಿಸ್ತಾನ ಕೂಡ ಒಂದು. ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ದೊಡ್ಡ ತಂಡಗಳೊಂದಿಗೆ ಸೆಮಿಸ್ ರೇಸ್‌ನಲ್ಲಿ ಉಳಿಯುವ ಮೂಲಕ ಅಚ್ಚರಿ ಮೂಡಿಸಿದೆ. ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಗೆಲುವು ಸಾಧಿಸಿದಂತೆಯೇ ಸೆಮಿಸ್ ಸ್ಥಾನವನ್ನೂ ತನ್ನದಾಗಿಸಿಕೊಂಡು ಸಂಚಲನ ಮೂಡಿಸುವ ಅವಕಾಶವಿದೆಯೇ? ಎಂಬುದು ತಿಳಿಯೋಣಾ ಬನ್ನಿ..
ಏಳು ಪಂದ್ಯಗಳಲ್ಲಿ ಏಳನ್ನೂ ಗೆದ್ದು ಭಾರತ ಮಾತ್ರ ಸೆಮಿಸ್ ತಲುಪಿದೆ. ಏಳು ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಸ್ ತಲುಪಿದೆ. ಆ ತಂಡದ ನೆಟ್ ರನ್ ರೇಟ್ ಸಹ ಉತ್ತಮವಾಗಿರುವುದರಿಂದ ಕೊನೆಯ ಎರಡು ಪಂದ್ಯಗಳಲ್ಲಿ (ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ) ಸೋತರೂ ಸೆಮಿಸ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (6 ಪಂದ್ಯಗಳಲ್ಲಿ 4 ಗೆಲುವು) ಮತ್ತು ನ್ಯೂಜಿಲೆಂಡ್ (7 ಪಂದ್ಯಗಳಲ್ಲಿ 4 ಗೆಲುವು) ನಂತರದ ಎರಡು ಸ್ಥಾನಗಳಲ್ಲಿವೆ. 7 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದ ಪಾಕಿಸ್ತಾನ ನಿನ್ನೆಯವರೆಗೂ ಐದನೇ ಸ್ಥಾನದಲ್ಲಿತ್ತು. ಆದರೆ ಶುಕ್ರವಾರ ಅಫ್ಘಾನಿಸ್ತಾನ ನಾಲ್ಕನೇ ಗೆಲುವಿನೊಂದಿಗೆ (7 ಪಂದ್ಯಗಳನ್ನು ಆಡಿದೆ) ಐದನೇ ಸ್ಥಾನಕ್ಕೆ ಏರಿತು. ಟೂರ್ನಿಯ ಅಂತಿಮ ಹಂತದಲ್ಲಿ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ತಂಡಗಳನ್ನು ಹಿಂದಕ್ಕೆ ತಳ್ಳಿ ಅಫ್ಘಾನಿಸ್ತಾನ ಅಗ್ರಸ್ಥಾನದಲ್ಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವನ್ನು ನೋಡುತ್ತಿರುವವರೆಲ್ಲರೂ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ತಂಡಗಳನ್ನು ಸೋಲಿಸಬಹುದು ಎಂದು ಭಾವಿಸಿದ್ದರು. ಆದರೆ ತಂಡ ನಿರೀಕ್ಷೆಗೂ ಮೀರಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿಗೆ ಆಘಾತ ನೀಡಿತು. ಪಂದ್ಯಾವಳಿಯನ್ನು ಎಂದಿನಂತೆ ಆರಂಭಿಸಿದ ತಂಡ, ನಂತರ ಅನಿರೀಕ್ಷಿತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು.