ಮುಂಬೈ (ಮಹಾರಾಷ್ಟ್ರ):ಏಕದಿನ ವಿಶ್ವಕಪ್ ಕ್ರಿಕೆಟ್ ಅಭಿಯಾನದ ಇಂದಿನ ಪಂದ್ಯದಲ್ಲಿ ಭಾರತವು ಶ್ರೀಲಂಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಸತತ 6 ಗೆಲುವು ದಾಖಲಿಸಿರುವ ರೋಹಿತ್ ಟೀಂ ಇದೀಗ ಸೆಮೀಸ್ಗೆ ಲಗ್ಗೆ ಇಡುವ ಉತ್ಸಾಹದಲ್ಲಿದೆ. ರೋಹಿತ್ ತಮ್ಮ ವೈಯಕ್ತಿಕ ಪ್ರದರ್ಶನದ ಜೊತೆಗೆ ನಾಯಕತ್ವದ ಜವಾಬ್ದಾರಿಯಿಂದಲೂ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಲಂಕಾ ವಿರುದ್ಧದ ಪಂದ್ಯದ ವೇಳೆ ನಡೆದ ಮಾಧ್ಯಮಗೋಷ್ಠಿಯಲ್ಲಿ, ತಮ್ಮ ನಾಯಕತ್ವದ ಶೈಲಿಯ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ.
ನಾನು ಪರಿಸ್ಥಿತಿಗಳ ಬಗ್ಗೆ ನಿರ್ಣಯ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ನಾವು ಪ್ರತಿಯೊಂದು ಸಣ್ಣ ವಿಷಯಗಳ ಬಗ್ಗೆಯೂ ತಿಳಿದುಕೊಂಡು ಅದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಅದಕ್ಕನುಗುಣವಾಗಿ ಪ್ಲಾನ್ಗಳನ್ನು ಬದಲಾಯಿಸಬೇಕು. ಕೆಲವೊಮ್ಮೆ ಅವುಗಳಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ ಅಥವಾ ಪ್ರಯೋಜನಕಾರಿಯಾಗುವುದಿಲ್ಲ. ಆದರೆ ಪ್ರಯತ್ನ ಮಾತ್ರ ಸಾಗುತ್ತಲೇ ಇರುತ್ತದೆ. ನಮ್ಮಿಂದ ಪ್ರತಿ ಪಂದ್ಯಕ್ಕೂ ಕಠಿಣ ಶ್ರಮವಿರಬೇಕು. ಮೈದಾನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಗೆಲುವಿಗಾಗಿ ಮಾತ್ರ ಎಂದು ನಾನು ನಂಬುತ್ತೇನೆ. ನಾನು ಎದುರಾಳಿ ತಂಡಗಳ ಸಾಮರ್ಥ್ಯವೇನು? ಮತ್ತು ಅಂತಹ ಕಠಿಣ ಸಂದರ್ಭಗಳಲ್ಲಿ ಅವರೇನು ಮಾಡುತ್ತಾರೆ? ಎಂಬುದರ ಬಗ್ಗೆಯೂ ಯೋಚಿಸುತ್ತಿರುತ್ತೇನೆ. ಇದೇ ವಿಷಯದ ಬಗ್ಗೆ ಬೌಲರ್‌ಗಳಿಗೂ ಹೇಳುತ್ತಿರುತ್ತೇನೆ ಎಂದು ಶರ್ಮಾ ಹೇಳಿದರು.
ಬ್ಯಾಟರ್‌ಗಳು ರನ್‌ಗಳನ್ನು ಪಡೆಯುವುದನ್ನು ತಡೆಯಲು ಮತ್ತು ವಿಕೆಟ್‌ಗಳನ್ನು ಉರುಳಿಸುವುದಕ್ಕೆ ಫೀಲ್ಡಿಂಗ್‌ನಲ್ಲಿ ಕೆಲವು ಬದಲಾವಣೆ ಮಾಡುವುದು ಮುಖ್ಯ. ನನ್ನ ಪ್ರಕಾರ ಸಣ್ಣ ಬದಲಾವಣೆಗಳು ಮತ್ತು ಕಾರ್ಯತಂತ್ರದ ನಿರ್ಧಾರಗಳು ನಮಗೆ ಎದುರಾಳಿ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ನೀಡುತ್ತವೆ. ಆಟದ ತಂತ್ರಗಾರಿಕೆಯಲ್ಲಿ ತಂಡದ ಸಹ ಆಟಗಾರರು ಭಾಗವಹಿಸುವುದು ಬಹಳ ಮುಖ್ಯ. ಇದು ಸುಲಭದ ವಿಷಯವಲ್ಲ. ಅವರು ಅದನ್ನು ಅನುಸರಿಸದಿದ್ದರೆ ಯಾವುದೇ ನಿರ್ಧಾರವು ಅರ್ಥಪೂರ್ಣವಾಗುವುದಿಲ್ಲ. ತಂಡದ ಸಾಧನೆಯಲ್ಲಿ ನನಗೆ ಮತ್ತು ಇತರ ಹತ್ತು ಮಂದಿಗೆ ಈ ಶ್ರೇಯಸ್ಸು ಸಲ್ಲಬೇಕು ಎಂದರು.
ತಂಡದ ನಿರ್ಧಾರಗಳಿಗೆ ಬದ್ಧರಾಗಿ ಪಂದ್ಯವನ್ನು ಮುನ್ನಡೆಸುವವರೂ ಅವರೇ. ನಾಯಕನಾಗಿ ಇದು ನನ್ನ ಕಲ್ಪನೆ ಮಾತ್ರವಲ್ಲ. ಈಗ ಎಲ್ಲವೂ ಸಕಾರಾತ್ಮಕವಾಗಿರುವುದರಿಂದ ಎಲ್ಲವೂ ಸರಿಯಾಗಿದೆ. ಪ್ರತಿ ಪಂದ್ಯದ ಫಲಿತಾಂಶದ ಬಗ್ಗೆ ನನಗೆ ಅರಿವಿದೆ. ಸತತ ಗೆಲುವು ಸಾಧಿಸುತ್ತಿರುವುದರಿಂದ ಈಗ ಯಾವುದೇ ತೊಂದರೆ ಇಲ್ಲ. ಆದರೆ, ಕೆಲವೊಮ್ಮೆ ನಾನು ಕೆಟ್ಟ ನಾಯಕನಂತೆಯೂ ಕಾಣುತ್ತೇನೆ. ಇಲ್ಲಿಯವರೆಗೆ ತಂಡದ ಯಶಸ್ಸಿಗೆ ಏನು ಬೇಕು ಎಂಬುದರ ಮೇಲೆ ನಿಗಾ ವಹಿಸಿದ್ದೇನೆ ಎಂದು ರೋಹಿತ್ ಶರ್ಮಾ ಬಹಿರಂಗಪಡಿಸಿದರು.