ಬೆಂಗಳೂರು:ವಿಶ್ವಕಪ್‌ನ ಲೀಗ್ ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸುವ ಮೂಲಕ ಡೇವಿಡ್ ವಾರ್ನರ್ (163) ಪಂದ್ಯ ಶ್ರೇಷ್ಠ ಎನಿಸಿದರು. ಏಕದಿನ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟದ ಮೈಲಿಗಲ್ಲು (2011ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ತಿಲಕರತ್ನೆ ದಿಲ್ಶಾನ್ - ಉಪುಲ್ ತರಂಗಾರ 282 ರನ್) ದಾಟುವ ಅವಕಾಶದಿಂದ ವಂಚಿತರಾದ ಆಸೀಸ್ ಆರಂಭಿಕ ಜೋಡಿ 259 ರನ್ ಗಳಿಸುವ ಮೂಲಕ ಬೆಂಗಳೂರಿನ ಅಭಿಮಾನಿಗಳ ಜೋಶ್ ಹೆಚ್ಚಿಸಿತು. ವಾರ್ನರ್ಗೆ ತಕ್ಕ ಸಾಥ್ ನೀಡುವ ಮೂಲಕ ಮತ್ತೋರ್ವ ಆಟಗಾರ ಮಿಚೆಲ್ ಮಾರ್ಷ್ (121) ತಮ್ಮ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಂಡರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ಗೆ ಬಂದ ಮಿಚೆಲ್ ಮಾರ್ಷ್ಗೆ ಅಭಿಮಾನಿಗಳು ಸಾಮೂಹಿಕವಾಗಿ ಬರ್ತ್ ಡೇ ಸಾಂಗ್ ಹೇಳುವ ಮೂಲಕ ಶುಭಾಶಯ ಕೋರಿದ್ದು ಗಮನ ಸೆಳೆಯಿತು. ಅಭಿಮಾನಿಗಳ ಪ್ರೀತಿಗೆ ಥಂಬ್ಸ್ ಅಪ್ ತೋರಿಸುವ ಮೂಲಕ ಮಾರ್ಷ್ ಸಹ ತಮ್ಮ ಧನ್ಯವಾದ ಸೂಚಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಗೆಲವು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿನ್ನೆ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸುಧಾರಿತ ಪ್ರದರ್ಶನ ತೋರಿಸಿದ್ದ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನವನ್ನು 62 ರನ್ಗಳಿಂದ ಮಣಿಸಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಆ್ಯಡಂ ಝಂಪಾ ಅವರು ಪಾಕಿಸ್ತಾನಿ ಬ್ಯಾಟ್ಸ್ಮನ್ಗಳಿಗೆ ಕಂಠಕವಾದರು. ಪಾಕಿಸ್ತಾನದ ಪರ ಆರಂಭಿಕ ಜೋಡಿಯ ದೊಡ್ಡ ಜೊತೆಯಾಟದ ಹೊರತಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. ಇದರಿಂದ 45.3 ಓವರ್ಗೆ 305ಕ್ಕೆ ಪಾಕ್ ತಂಡವು ಪತನ ಕಂಡು ಸೋಲು ಅನುಭವಿಸಿತು.