ಬೆಂಗಳೂರು:ಏಕದಿನವಿಶ್ವಕಪ್ ಸರಣಿಯ 25ನೇ ಪಂದ್ಯ ಇಂದು ಹಾಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ತಂಡಗಳು ತಲಾ ಒಂದು ಪಂದ್ಯವನ್ನು ಮಾತ್ರವೇ ಗೆದ್ದು ಮೂರಲ್ಲಿ ಸೋಲು ಕಂಡಿವೆ. ಸದ್ಯ ಅಂಕಪಟ್ಟಿಯಲ್ಲಿ ಶ್ರೀಲಂಕಾ 7ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 8ನೇ ಸ್ಥಾನದಲ್ಲಿದೆ. ಸೆಮಿಸ್ ರೇಸ್ನಲ್ಲಿ ಉಳಿಯಲು ಇಂದಿನ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ.
ಪಿಚ್ ವರದಿ:ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಂಪೂರ್ಣ ಬ್ಯಾಟಿಂಗ್ ಪಿಚ್ ಆಗಿದೆ. ಇಲ್ಲಿ ಬೌಂಡರಿ ಲೆಂತ್ಕೂಡ ಚಿಕ್ಕದಾಗಿದ್ದು ಹೆಚ್ಚಿನ ರನ್ ಹರಿಸಬಹುದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನ್ನಲಾಗುತ್ತದೆ. ಉಳಿದಂತೆ ಬೌಲಿಂಗ್ನಲ್ಲಿ ಸ್ಪಿನ್ನರ್‌ಗಳಿಗೆ ಸಹಾಯಕವಾಗಿರಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ರನ್ ಮಳೆ ಹರಿಸಿದ್ದವು. ಇಂದಿನ ಪಂದ್ಯದಲ್ಲೂ ದೊಡ್ಡ ಮಟ್ಟದ ಸ್ಕೋರ್ ದಾಖಲಾಗುವ ಸಾಧ್ಯತೆ ಇದೆ.
ಚಿನ್ನಸ್ವಾಮಿ ಕ್ರೀಡಾಂಗಣ ಅಂಕಿ - ಅಂಶ:ಈ ಮೈದಾನದಲ್ಲಿ ಈವರೆಗೂಒಟ್ಟು 39 ಏಕದಿನ ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡ 15 ಬಾರಿ ಗೆದ್ದರೆ, ಚೇಸಿಂಗ್ ಮಾಡಿರುವ ತಂಡಗಳು 20 ಬಾರಿ ಗೆಲುವು ದಾಖಲಿಸಿವೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 235 ಆಗಿದ್ದು, ಎರಡನೇ ಇನಿಂಗ್ಸ್‌ನ ಸರಾಸರಿ ಸ್ಕೋರ್ 218 ಆಗಿರಲಿದೆ. ಚಿನ್ನಸ್ವಾಮಿಯಲ್ಲಿ ದಾಖಲಾದ ಹೈಸ್ಕೋರ್ 383 ಆಗಿದ್ದು, ಲೋ ಸ್ಕೋರ್ 166 ಆಗಿದೆ.
ಹವಮಾನ ವರದಿ:ಬೆಂಗಳೂರಿನಲ್ಲಿ ಇಂದಿನ ತಾಪಮಾನ ಗರಿಷ್ಠ 31ಡಿಗ್ರಿ ಸೆಲ್ಸಿಯಸ್ ಇದ್ದೆ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಳೆ ಬರುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.