ಪುಣೆ (ಮಹಾರಾಷ್ಟ್ರ): ವಿಶ್ವಕಪ್‌ನ (Cricket world cup) ಭಾಗವಾಗಿ ಭಾರತ ಮತ್ತು ಬಾಂಗ್ಲಾದೇಶ ಇಂದು ಎದುರಾಗಲಿವೆ. ಟೀಂ ಇಂಡಿಯಾ ಆಡಿದ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಮೂರು ಪಂದ್ಯಗಳನ್ನು ಆಡಿದ್ದು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಆದರೆ, ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಬಾಂಗ್ಲಾ ತಂಡಕ್ಕೆ ಬಲಿಷ್ಠ ತಂಡವನ್ನೂ ಸೋಲಿಸುವ ಸಾಮರ್ಥ್ಯವಿದೆ. 2007ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಭಾರತಕ್ಕೆ ಆಘಾತ ನೀಡಿದ್ದು, ಗೊತ್ತೇ ಇದೆ. ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಾನು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಎಂದಿಗೂ ಸ್ಲೆಡ್ಜ್ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ಮುಷ್ಪೀಕರ್ ಬಹಿರಂಗಪಡಿಸಿದ್ದಾರೆ. ಸ್ಲೆಡ್ಜಿಂಗ್ ಮಾಡಿದ್ರೆ ಕೊಹ್ಲಿಯನ್ನು ಹೆಚ್ಚು ಉತ್ಸುಕಗೊಳಿಸುತ್ತದೆ ಮತ್ತು ಆಗ ಅವರು ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಾರೆ. ಹೀಗಾಗಿ ನಾವು ಅವರಿಗೆ ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಅವರು ವಿವರಿಸಿದರು. ಕೊಹ್ಲಿ ಬಾಂಗ್ಲಾದೇಶ ವಿರುದ್ಧ 26 ಪಂದ್ಯಗಳನ್ನು ಆಡಿದ್ದಾರೆ ಮತ್ತು 65.31 ಸರಾಸರಿಯಲ್ಲಿ 1,437 ರನ್ ಗಳಿಸಿದ್ದಾರೆ.
ಸ್ಲೆಡ್ಜಿಂಗ್ ಇಷ್ಟಪಡುವ ವಿಶ್ವದ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ಒಬ್ಬರು. ಹೀಗೆ ಮಾಡುವುದರಿಂದ ಅವರು ಹೆಚ್ಚು ಉತ್ಸಾಹದಿಂದ ಆಡುತ್ತಾರೆ. ಹಾಗಾಗಿ ನಾನು ವಿರಾಟ್ ಕೊಹ್ಲಿಯನ್ನು ಎಂದಿಗೂ ಸ್ಲೆಡ್ಜ್ ಮಾಡುವುದಿಲ್ಲ. ಸ್ಲೆಡ್ಜಿಂಗ್ ಅವನನ್ನು ಹೆಚ್ಚು ಉತ್ಸಾಹದಿಂದ ಆಡುವಂತೆ ಮಾಡುತ್ತದೆ. ಸ್ಲೆಡ್ಜಿಂಗ್ ಮಾಡದೆ ಆದಷ್ಟು ಬೇಗ ಅವರನ್ನು ಹೊರಹಾಕುವಂತೆ ನಾನು ಯಾವಾಗಲೂ ನಮ್ಮ ಬೌಲರ್‌ಗಳಿಗೆ ಕಿವಿ ಮಾತನ್ನು ಹೇಳುತ್ತೇನೆ. ನಾನು ಭಾರತದ ವಿರುದ್ಧ ಬ್ಯಾಟಿಂಗ್ ಮಾಡಲು ಹೊರಟಾಗಲೆಲ್ಲಾ ಕೊಹ್ಲಿ ನನ್ನನ್ನು ಸ್ಲೆಡ್ಜ್ ಮಾಡಲು ಪ್ರಯತ್ನಿಸುತ್ತಾರೆ. ಅವರು ನಿಜವಾಗಿಯೂ ಸ್ಪರ್ಧಾತ್ಮಕ ಕ್ರಿಕೆಟಿಗ. ಅವರು ಯಾವುದೇ ಕ್ರಿಕೆಟ್ ಪಂದ್ಯವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅವರೊಂದಿಗಿನ ಸ್ಪರ್ಧೆ ಮತ್ತು ಭಾರತವನ್ನು ಎದುರಿಸುವ ಸವಾಲು ನನಗೆ ಇಷ್ಟವಾಗಿದೆ ಎಂದು ಮುಷ್ಪೀಕರ್ ರಹೀಮ್ ವಿವರಿಸಿದರು.
ಬಾಂಗ್ಲಾದೇಶದ ಕೋಚ್ ಹೇಳಿದ್ದು ಹೀಗೆ..:ಎಲ್ಲ ವಿಭಾಗಗಳಲ್ಲೂ ಭಾರತ ಬಲಿಷ್ಠವಾಗಿದೆ. ಸ್ಟ್ರೈಕ್ ಬೌಲರ್‌ಗಳಿದ್ದಾರೆ. ಬುಮ್ರಾ ತಮ್ಮ ಅತ್ಯುತ್ತಮ ಸ್ಥಿತಿಗೆ ಮರಳಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಅನುಭವಿ ಸ್ಪಿನ್ನರ್‌ಗಳಿದ್ದಾರೆ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಭಾರತ ಚೆನ್ನಾಗಿ ಆಡುತ್ತಿದೆ. ನಿರ್ಭೀತಿಯಿಂದ ಆಡುತ್ತಿರುವ ಭಾರತ ತಂಡ ಎದುರಾಳಿಗಳನ್ನು ಕಾಡುತ್ತಿದೆ. ತವರು ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಉತ್ತಮ ಬೆಂಬಲ ಸಿಗುತ್ತಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಆಡಲಿದ್ದಾರೆ. ಸ್ಕ್ಯಾನ್ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಪಂದ್ಯಕ್ಕೂ ಮುನ್ನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇತ್ತೀಚೆಗೆ ಭಾರತದ ವಿರುದ್ಧ ನಮ್ಮ ದಾಖಲೆ ಉತ್ತಮವಾಗಿದೆ. ಆದರೆ ವಿಶ್ವಕಪ್‌ನಲ್ಲಿ ಆ ತಂಡದ ವಿರುದ್ಧ ಗೆಲ್ಲಲು ಕಠಿಣ ಪರಿಶ್ರಮ ಪಡಬೇಕು. ಬ್ಯಾಟರ್‌ಗಳು ಮಿಂಚಬೇಕು ಎಂದು ಬಾಂಗ್ಲಾದೇಶದ ಕೋಚ್ ಚಂಡಿಕಾ ಹತುರುಸಿಂಗ ಅವರು ಹೇಳಿದರು.
ಓದಿ:Cricket world cup: ಇಂದು ಭಾರತ-ಬಾಂಗ್ಲಾದೇಶ ಮಧ್ಯೆ ಕದನ.. ಬಲಾಬಲ, ಪಿಚ್ ವರದಿ, ಕಾಡಲಿದೆಯಾ ಮಳೆ?