ಲಖನೌ(ಉತ್ತರ ಪ್ರದೇಶ):ಈ ಬಾರಿಯ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನದಿಂದ ಎರಡು ಪಂದ್ಯಗಳನ್ನು ಕೈಚೆಲ್ಲಿದ್ದ ಆಸ್ಟ್ರೇಲಿಯಾ ಸೋಮವಾರ ನಡೆದ ಮ್ಯಾಚ್ನಲ್ಲಿ ಗೆಲುವಿನ ಕೇಕೆ ಹಾಕಿದೆ.ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅವರು ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್‌ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಡಮ್ ಝಂಪಾ ಕಳೆದ ಎರಡು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.
31 ವರ್ಷದ ಝಂಪಾ ಅವರು 47 ರನ್ಗಳನ್ನು ನೀಡಿ 4 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಶ್ರೀಲಂಕಾವನ್ನು 209 ರನ್‌ಗಳಿಗೆ ಕಟ್ಟಿಹಾಕಿತ್ತು. ನಂತರ ಶ್ರೀಲಂಕಾ ನೀಡಿದ್ದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಸ್ವಲ್ಪ ಬೆನ್ನು ನೋವು ಇದ್ದಿದ್ದರಿಂದ ನಾನು ಉತ್ತಮವಾಗಿ ಆಟವಾಡುತ್ತೇನೆ ಎಂಬ ಭಾವನೆ ಹೊಂದಿರಲಿಲ್ಲ. ಕಳೆದೆರಡು ದಿನಗಳಿಂದ ನಾನು ಇದೇ ಭಾವನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಈ ಪಂದ್ಯದಲ್ಲಿ ನಾನು ಉತ್ತಮವಾಗಿದ್ದೇನೆ ಮತ್ತು ಉತ್ತಮವಾಗಿ ಬೌಲಿಂಗ್ ಮಾಡಿದ್ದೇನೆ ಎಂದು ಝಂಪಾ ಆಟದ ನಂತರ ಹೇಳಿದರು.