ಮುಂಬೈ(ಮಹಾರಾಷ್ಟ್ರ):ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್‌ಗೆ ಗಂಟೆಗಳ ಮೊದಲು ವಿವಾದವೊಂದು ಭುಗಿಲೆದ್ದಿದೆ. ಬಿಸಿಸಿಐ ಸೂಚನೆಯ ಮೇರೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂ ಪಿಚ್‌ನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆಂಗ್ಲ ಮಾಧ್ಯಮಗಳು ಹೇಳಿಕೊಂಡಿವೆ. ಬಿಸಿಸಿಐ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್ ಸಿದ್ಧಪಡಿಸಿಕೊಂಡಿದೆ ಎಂಬುದು ಇದರ ಹಿಂದಿನ ತರ್ಕ. ಆದರೆ, ಬಿಸಿಸಿಐ ಅಂತಹ ವರದಿಗಳನ್ನು ನಿರಾಕರಿಸಿದ್ದು, ಟೂರ್ನಿಯ ನಾಕೌಟ್ ಪಂದ್ಯಗಳ ಪಿಚ್ ಅನ್ನು ಐಸಿಸಿ ಕ್ಯುರೇಟರ್ ಸಿದ್ಧಪಡಿಸಿದ್ದಾರೆ ಎಂದು ಹೇಳಿದೆ.
"ಐಸಿಸಿಯ ಸ್ವತಂತ್ರ ಪಿಚ್ ಸಲಹೆಗಾರರು ತಮ್ಮ ಉದ್ದೇಶಿತ ಪಿಚ್ ಹಂಚಿಕೆಗಳಲ್ಲಿ ಆತಿಥೇಯರು ಮತ್ತು ಸ್ಥಳಗಳೊಂದಿಗೆ ಕೆಲಸ ಮಾಡುತ್ತಾರೆ. ಈ ಪ್ರಕ್ರಿಯೆಯು ಪಂದ್ಯಾವಳಿಯ ಉದ್ದಕ್ಕೂ ಮುಂದುವರಿಯುತ್ತದೆ" ಎಂದು ಬಿಸಿಸಿಐ ವಕ್ತಾರರು ಆಂಗ್ಲ ಮಾಧ್ಯಮಗಳಿಗೆ ತಿಳಿಸಿದರು. ಐಸಿಸಿ ಈವೆಂಟ್‌ಗಳಲ್ಲಿನ ಪಿಚ್‌ಗಳನ್ನು ಐಸಿಸಿ ಸಲಹೆಗಾರ ಆ್ಯಂಡಿ ಅಟ್ಕಿನ್ಸನ್ ಅವರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಆತಿಥೇಯ ಕ್ರಿಕೆಟ್ ಮಂಡಳಿಯು ಸಿದ್ಧಪಡಿಸಿದ ಪಿಚ್ ಆಧರಿಸಿ ಯಾವ ಪಿಚ್ ಅನ್ನು ಬಳಸಬೇಕೆಂದು ಪಿಚ್ ಸಲಹೆಗಾರರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಹೀಗಿದ್ದರೂ ಸಹಿತ ಆಂಗ್ಲ ಮಾಧ್ಯಮಗಳ ವರದಿಯ ಪ್ರಕಾರ ಸೆಮಿಫೈನಲ್ ಪಂದ್ಯಗಳು ನಡೆಯುವ ಪಿಚ್ ಆರಂಭದಲ್ಲಿ ಆಯ್ಕೆ ಮಾಡಿದ ಪಿಚ್ ಅಲ್ಲ. ನಾಕೌಟ್ ಪಂದ್ಯಕ್ಕೆ ಪಿಚ್ ಸಂಖ್ಯೆ 7 ಅನ್ನು ಬಳಸಬೇಕಾಗಿತ್ತು. ಅದು ತಾಜಾ ಪಿಚ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಪಿಚ್ ಸಂಖ್ಯೆ 6ನ್ನು ಸೆಮಿಫೈನಲ್‌ನಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಪಿಚ್‌ನಲ್ಲಿ ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಮತ್ತು ಭಾರತ vs ಶ್ರೀಲಂಕಾ ಪಂದ್ಯಗಳು ನಡೆದಿವೆ. ನಿನ್ನೆ ಸಂಜೆ ಕೋಚ್ ರಾಹುಲ್ ದ್ರಾವಿಡ್ ಪಿಚ್ ಅನ್ನು ದೀರ್ಘವಾಗಿ ವೀಕ್ಷಿಸಿದರು ಎಂದು ವರದಿ ಬಿತ್ತರಿಸಿವೆ.