ಕೊಲ್ಕತ್ತಾ: ಏಕದಿನ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಳೆ (ಗುರುವಾರ) ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪೈಪೋಟಿ ಇದೆ. ಸೆಮಿಫೈನಲ್ ಪ್ರವೇಶಿರುವ ನಾಲ್ಕು ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ವಿಶ್ವಕಪ್ ಗೆಲ್ಲುವ ತವಕದಲ್ಲಿವೆ.
ಭಾರತ ಲೀಗ್ ಹಂತದ 9 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೂಪರ್ ಫೋರ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇಂದು ನ್ಯೂಜಿಲೆಂಡ್-ಭಾರತ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಗೆದ್ದವರು ನೇರ ಫೈನಲ್ ಪ್ರವೇಶ ಪಡೆಯುವರು.
ಈಡನ್ ಗಾರ್ಡನ್ಸ್ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಗುರುವಾರ ಸಾಧಾರಣ ಮಳೆಯಾಗಲಿದೆ, ಶುಕ್ರವಾರ ಜಡಿ ಮಳೆ ಸುರಿಯಲಿದೆ ಎಂದಿದೆ. ಹವಾಮಾನ ಇಲಾಖೆ ಪ್ರಾದೇಶಿಕ ನಿರ್ದೇಶಕ ಗಣೇಶ್ ದಾಸ್ ಪ್ರತಿಕ್ರಿಯಿಸಿ, ಗುರುವಾರ ಮಧ್ಯಮ ಮತ್ತು ಹಗುರ ಮಳೆಯಾಗುವ ಸಂಭವವಿದೆ. 2ರಿಂದ 3 ಸೆಂಟಿಮೀಟರ್ ಮಳೆಯಾಗಬಹುದು. ಮೋಡ ಕವಿದ ವಾತಾವರಣ ಇರಲಿದೆ. ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಗೋಚರಿಸಿದೆ ಎಂದು ತಿಳಿಸಿದ್ದಾರೆ.