ಲಖನೌ (ಉತ್ತರಪ್ರದೇಶ): ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಮತ್ತೆ ರನ್ ಹೊಳೆ ಹರಿದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಕಾಂಗರೂಗಳ ಬೌಲರ್ಗಳ ದಾಳಿಯ ಹೊರತಾಗಿಯೂ ಉತ್ತಮ ರನ್ ಕಲೆ ಹಾಕಿತು.
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಶತಕ ಮತ್ತು ಐಡೆನ್ ಮಾರ್ಕ್ರಾಮ್ ಅರ್ಧ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 311 ರನ್ ಸಂಗ್ರಹಿಸಿದೆ. ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 312 ರನ್ ಬೇಕು.
ಕ್ರೀಸ್ಗಿಳಿಯುತ್ತಿದ್ದಂತೆ ಹೊಡಿಬಡಿ ಆಟ ಶುರುವಿಟ್ಟ ಡಿಕಾಕ್ ನಿರೀಕ್ಷೆ ಹುಸಿಗೊಳಿಸಲಿಲ್ಲ. ಕಾಂಗರೂಗಳ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಕ್ವಿಂಟನ್, 106 ಎಸೆತಗಳಲ್ಲಿ 5 ಸಿಕ್ಸ್, 8 ಬೌಂಡರಿ ಸಹಿತ 109 ರನ್ ಗಳಿಸಿ ಮತ್ತೆ ಹೀರೋ ಆದರು. ವಿಶ್ವಕಪ್‌ನಲ್ಲಿ ಇದು ಅವರ ಸತತ ಎರಡನೇ ಶತಕವಾಯ್ತು.
ಆದರೆ, ಅವರೊಂದಿಗೆ ಕಣಕ್ಕಿಳಿದಿದ್ದ ನಾಯಕ ತೆಂಬಾ ಬವುಮಾ ಹೆಚ್ಚು ನಿಲ್ಲದೇ ಮತ್ತೆ ನಿರಾಸೆ ಮೂಡಿಸಿದರು. 55 ಎಸೆತ ಎದುರಿಸಿದ ತೆಂಬಾ, 2 ಬೌಂಡರಿ ಸಹಿತ ಕೇವಲ 35 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಮೊದಲ ಬಲಿಯಾದರು. ಆದರೆ, ಡಿಕಾಕ್ ಅವರ ಆಟ ಮಾತ್ರ ಮುಂದುವರೆದಿತ್ತು.
ತೆಂಬಾ ಬಳಿಕ ಬಂದ ರಾಸ್ಸಿ ವ್ಯಾನ್ ಡೆರ್ ಡುಸೆನ್ ಕೂಡ ಕ್ವಿಂಟನ್ಗೆ ಸಾಥ್ ನೀಡುವಲ್ಲಿ ವಿಫಲರಾದರು. 30 ಬಾಲ್ ಆಡಿದ ರಾಸ್ಸಿ, ಕೇವಲ 26 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಈ ಘಳಿಗೆಯಲ್ಲಿ ಶತಕ ಫೂರ್ಣಗೊಳಿಸಿದ್ದ ಕ್ವಿಂಟನ್, ತಂಡದ ಮೊತ್ತ 197 ರನ್ ಆದಾಗ 34.5ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿ ತಮ್ಮ ಆಟಕ್ಕೆ ಫುಲ್ ಸ್ಟಾಪಿಟ್ಟರು. ಡಿಕಾಕ್ ಔಟಾದ ಬಳಿಕ ಅಬ್ಬರಿಸಿದ ಐಡೆನ್ ಮರ್ಕ್ರಾಮ್, ಆಕರ್ಷಕ ಅರ್ಧಶತಕ ಸಿಡಿಸಿದರು. 44 ಎಸೆತದಲ್ಲಿ 1 ಸಿಕ್ಸ್, 7 ಬೌಂಡರಿ ಸಹಿತ ಮಾರ್ಕ್ರಾಮ್, 56 ರನ್ ಕಲೆ ಹಾಕಿ ತಂಡದ ಮೊತ್ತವನ್ನು ಗರಿಷ್ಠ ಮಟ್ಟಕ್ಕೆ ತಂದು ನಿಲ್ಲಿಸಿದರು.
ಮಾರ್ಕ್ರಾಮ್ ಬಳಿಕ ಕಣಕ್ಕಿಳಿದ ಉಳಿದ ಯಾವ ಆಟಗಾರನೂ ಹೆಚ್ಚು ಹೊತ್ತು ನಿಲ್ಲದೇ ತಂಡಕ್ಕೆ ತಮ್ಮ ಅಲ್ಪ ಕಾಣಿಕೆ ನೀಡಿ ಹೊರ ನಡೆದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಎರಡು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ ತಲಾ ಒಂದೊಂದು ವಿಕೆಟ್ ಪಡೆದರು.
ಆಡುವ 11ರ ಬಳಗ- ಆಸ್ಟ್ರೇಲಿಯಾ ತಂಡ:ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.
ದಕ್ಷಿಣ ಆಫ್ರಿಕಾ:ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ.