ನವದೆಹಲಿ :ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮತಾಂತರದ ಬಗ್ಗೆ ನೀಡಿರುವ ಹೇಳಿಕೆಗೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮೊದಲು ಇಂಜಮಾಮ್ ಉಲ್ ಹಕ್ ಅವರು ವಿಡಿಯೋವೊಂದರಲ್ಲಿ ಮಾತನಾಡುವಾಗ ಹರ್ಭಜನ್ ಸಿಂಗ್ ಅವರು ಇಸ್ಲಾಂ ಧರ್ಮವನ್ನು ಅನುಸರಿಸಲು ಮುಂದಾಗಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹರ್ಭಜನ್ ಸಿಂಗ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮಾತನಾಡಿರುವ ವಿಡಿಯೋದಲ್ಲಿ, ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದ ಬಳಿಕ ಪಾಕ್ ಇಸ್ಲಾಮಿಕ್ ಬೋಧಕ ತಾರೀಕ್ ಜಮೀಲ್ ಅವರು ಪಾಕ್ ತಂಡದ ಆಟಗಾರರೊಂದಿಗೆ ಪ್ರಾರ್ಥನೆ ಮಾಡುತ್ತಿದ್ದರು. ಸಂಜೆ ಪ್ರಾರ್ಥನೆ ವೇಳೆ ಭಾರತದ ಸ್ಟಾರ್ ಆಟಗಾರರಾದ ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್, ಜಹೀರ್ ಖಾನ್ ಅವರನ್ನು ನಾವು ಪ್ರಾರ್ಥನೆಗೆ ಆಹ್ವಾನಿಸಿದ್ದೆವು. ಈ ವೇಳೆ ಭಾರತ ತಂಡದ ಇತರ ಆಟಗಾರರ ಜೊತೆ ಹರ್ಭಜನ್ ಸಿಂಗ್ ಕೂಡ ಬಂದಿದ್ದರು. ಈ ವೇಳೆ ತಾರಿಕ್ ಜಮೀಲ್ ಅವರ ಬೋಧನೆಗಳನ್ನು ಕೇಳಿ ಹರ್ಭಜನ್ ಆಕರ್ಷಿತರಾಗಿದ್ದರು ಮತ್ತು ಅವರ ಬೋಧನೆಗಳನ್ನು ಅನುಸರಿಸಬೇಕೆಂದು ಅನಿಸುತ್ತಿದೆ ಎಂದು ಹೇಳಿರುವುದಾಗಿ ಉಲ್ ಹಕ್ ತಿಳಿಸಿದ್ದರು.
ಜೊತೆಗೆ ಉಲ್ ಹಕ್, ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಯೂಸುಫ್ (ಯೂಸುಫ್ ಯೌಹಾನ) ಮೂಲತಃ ಕ್ರಿಶ್ಚಿಯನ್ ಆಗಿದ್ದರು. ಅವರು ಪಾಕಿಸ್ತಾನಕ್ಕೆ ಆಡಿದ ನಾಲ್ಕನೇ ಕ್ರಿಶ್ಚಿಯನ್ ಆಟಗಾರರಾಗಿದ್ದಾರೆ. ಬಳಿಕ ಇಸ್ಲಾಂಗೆ ಮತಾಂತರಗೊಂಡಿದ್ದರು. ಯೂಸುಫ್ ಅವರು ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರನ್ನು ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.