ಹೈದರಾಬಾದ್:ಐಸಿಸಿಏಕದಿನವಿಶ್ವಕಪ್ನ 27ನೇಯ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ದುಕೊಂಡು, ಆಸ್ಟ್ರೇಲಿಯಾಗೆ ಬ್ಯಾಟಿಂಗ್ಗೆ ಆಹ್ವಾನಿಸಿದೆ. 5 ಬಾರಿಯ ವಿಶ್ವ ಚಾಂಪಿಯನ್ ಕಾಂಗರೂ ಪಡೆ ಧರ್ಮಶಾಲಾದಲ್ಲಿ ಕಿವೀಸ್ ತಂಡವನ್ನು ಎದುರಿಸಲಿದೆ. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ 5 ಪಂದ್ಯಗಳನ್ನು ಆಡಿ 4ರಲ್ಲಿ ಗೆಲುವು ಸಾಧಿಸಿ 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರು ಪಂದ್ಯಗಳನ್ನು ಜಯಿಸಿ 6 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಆರಂಭಿಕ ಎರಡು ಪಂದ್ಯಗಳ ಸೋಲಿನೊಂದಿಗೆ ಟೂರ್ನಿ ಆರಂಭ ಮಾಡಿದ ಆಸಿಸ್ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸುವ ಮೂಲಕ ಅದ್ಭುತ ಕಮ್ಬ್ಯಾಕ್ ಮಾಡಿದೆ. ಇಂದಿನ ಪಂದ್ಯವನ್ನು ಜಯಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲು ಕಾಂಗರೂ ಪಡೆ ಯೋಜನೆ ರೂಪಿಸಿದೆ. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಕಿವೀಸ್ ಪಡೆ ಭಾರತದ ವಿರುದ್ಧ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಪಿಚ್ ವರದಿ:ಧರ್ಮಶಾಲಾ ಪಿಚ್ನಲ್ಲಿ ವೇಗದ ಬೌಲರ್ಗಳ ಪಾತ್ರ ಮುಖ್ಯವಾಗಿದೆ. ಬ್ಯಾಟರ್ಗಳು ಕ್ರೀಸ್ನಲ್ಲಿ ನೆಲೆಯೂರಲು ಕೆಲ ಸಮಯ ತೆಗದುಕೊಳ್ಳಬಹುದು. ಒಮ್ಮೆ ಬ್ಯಾಟ್ಸ್ಮಾನ್ಗಳು ಕ್ರೀಸ್ಗೆ ಒಗ್ಗಿಕೊಂಡರೆ ದೊಡ್ಡ ಮೊತ್ತದ ಸ್ಕೋರ್ ಕೆಲೆಹಾಕಬಲ್ಲರು. ಆಟ ಮುಂದುವರೆದಂತೆ ಸ್ಪಿನ್ನರ್ಗಳೂ ಹಿಡಿತ ಸಾಧಿಸಬಹುದಾಗಿದೆ. ಈ ಮೈದಾನದಲ್ಲಿ ನಡೆದ ಹಿಂದಿನ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ವೇಗಿ ಮೊಹ್ಮದ್ ಶಮಿ 5 ವಿಕೆಟ್ಗಳನ್ನು ಪಡೆದಿದ್ದರು. ಒಟ್ಟಾರೆ ಪಂದ್ಯದಲ್ಲಿ ವೇಗದ ಬೌಲರ್ಗಳು 11 ವಿಕೆಟ್ಗಳನ್ನು ಉರಳಿಸಿದ್ದರೆ, ಸ್ಪಿನ್ನರ್ಗಳು 3 ವಿಕೆಟ್ಗಳನ್ನು ಪಡೆದಿದ್ದರು.
ಧರ್ಮಶಾಲಾ ಸ್ಟೇಡಿಯಂ ಅಂಕಿ - ಅಂಶ:ಧರ್ಮಶಾಲಾದಲ್ಲಿ ಈವರೆಗೂ ಒಟ್ಟು 8 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 3 ಬಾರಿ ಗೆಲುವು ದಾಖಲಿಸಿದರೆ, ಎರಡನೇ ಬ್ಯಾಟಿಂಗ್ ಮಾಡಿದ ತಂಡ 5 ಬಾರಿ ಗೆದ್ದಿದೆ. ಇಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 211 ರನ್ ಆಗಿದೆ. ಈ ಮೈದಾನದಲ್ಲಿ ದಾಖಲಾದ ಹೈಸ್ಕೋರ್ 364 ಆಗಿದ್ದು, ಲೋಸ್ಕೋರ್ 112 ಆಗಿದೆ.
ಹವಾಮಾನ ವರದಿ:ಧರ್ಮಶಾಲಾದಲ್ಲಿಂದು ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಳೆಯ ಸಾಧ್ಯತೆ ಕಡಿಮೆ ಇದ್ದು, ಸಂಜೆ ಸಮಯ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದೆ.