ನವದೆಹಲಿ:ವಿಶ್ವಕಪ್‌ನ 24ನೇ ಪಂದ್ಯ ಇಂದಿನ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದ ಕಾಂಗರೂ ಪಡೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅದ್ಭುತ ಕಮ್ಬ್ಯಾಕ್ ಮಾಡಿದೆ.
ಇಂದಿನ ಪಂದ್ಯದಲ್ಲೂ ಉತ್ತಮ ರನ್ರೇಟ್ನೊಂದಿಗೆ ಗೆಲುವು ದಾಖಲಿಸಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಆಸಿಸ್ ಸಜ್ಜಾಗಿದೆ. ಮತ್ತೊಂದೆಡೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿರುವ ನೆದರ್ಲೆಂಡ್ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂಬ ಸಂದೇಶವನ್ನು ನೀಡಿತ್ತು. ಹಿಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಕಠಿಣ ಪೈಪೋಟಿ ನೀಡಿ ಸೋಲು ಕಂಡಿರುವ ಡಚ್ಚರು, ಇಂದಿನ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಯೋಜನೆ ರೂಪಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ತಲಾ 4 ಪಂದ್ಯಗಳನ್ನು ಆಡಿವೆ. ಈ ಪೈಕಿ ಆಸ್ಟ್ರೇಲಿಯಾ 2ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ನೆದರ್ಲೆಂಡ್ ಒಂದರಲ್ಲಿ ಗೆದ್ದು ಏಳನೇ ಸ್ಥಾನದಲ್ಲಿದೆ.
ಪಿಚ್ ರಿಪೋರ್ಟ್:ಅರುಣ್ ಜೇಟ್ಲಿ ಮೈದಾನ ಬ್ಯಾಟಿಂಗ್ ಪಿಚ್ ಆಗಿದ್ದು, ಇಲ್ಲಿ ಬ್ಯಾಟಿಂಗ್ ಸುಲಭವಾಗಿರಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಸ್ಪಿನ್ನರ್ಗಳಿಗೆ ಸಹಾಯಕವಾಗಿರಲಿದೆ. ಬೌಂಡರಿ ಲೆಂತ್ ಕಡಿಮೆ ಇರುವುದರಿಂದ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಬೌಂಡರಿಗಳನ್ನು ಸಿಡಿಸುವುದನ್ನ ಕಾಣಬಹುದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತವೆ. ಕಾರಣ ದೊಡ್ಡ ಸ್ಕೋರ್ ಕಲೆ ಹಾಕುವ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಬಯಸುತ್ತವೆ.
ಹವಾಮಾನ:ದೆಹಲಿಯಲ್ಲಿಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ಗಳಷ್ಟು ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ ಎಂದು ಹವಮಾನ ಇಲಾಖೆ ವರದಿ ತಿಳಿಸಿವೆ.
ಸ್ಟೇಡಿಯಂ ಅಂಕಿ - ಅಂಶ:ಅರುಣ್ ಜೇಟ್ಲಿ ಮೈದಾನದಲ್ಲಿ ಈವರೆಗೂ ಒಟ್ಟು 31 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಮತ್ತು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡಗಳು ತಲಾ 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಒಂದು ಪಂದ್ಯ ರದ್ದಾಗಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 233, ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 210 ಆಗಿರಲಿದೆ. 428 ಈ ಸ್ಟೇಡಿಯಂನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಆಗಿದ್ದರೆ, 83 ಕನಿಷ್ಠ ಸ್ಕೋರ್ ಆಗಿದೆ.