ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್‌ನ ಅಂಗವಾಗಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದರು. ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್, ವೇಗದ ಶತಕದ ಜೊತೆಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಕ್ರಿಕೆಟ್‌ನ ಮೂರು ಮಾದರಿಯಲ್ಲಿ (ಟಿ20, ಏಕದಿನ, ಟೆಸ್ಟ್) ಒಟ್ಟು 553 ಸಿಕ್ಸ್ ಸಿಡಿಸಿದ್ದ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ 5 ಸಿಕ್ಸ್ ಬಾರಿಸುವ ಮೂಲಕ ಗೇಲ್ ದಾಖಲೆಯನ್ನು ಶರ್ಮಾ ಮುರಿದರು. ಈ ಮೂಲಕ ಕ್ರಿಕೆಟ್ ವೃತ್ತಿ ಜೀವನದಲ್ಲಿ ರೋಹಿತ್ 556 ಸಿಕ್ಸ್ ಸಿಡಿಸಿ ಅಭಿನಂದನೆಗೆ ಪಾತ್ರರಾದರು. ಶರ್ಮಾ ಸಾಧನೆಗೆ ಮೊದಲು ವಿಶ್ ಮಾಡಿದವರು ಕ್ರಿಸ್ ಗೇಲ್.!
"ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ರೋಹಿತ್ ಶರ್ಮಾಗೆ ಅಭಿನಂದನೆಗಳು. ಇದು #45 ವಿಶೇಷ." ಎಂದು ಗೇಲ್ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಎಕ್ಸ್ ಪೋಸ್ಟ್‌ನಲ್ಲಿ ಅಭಿನಂದಿಸಿದ್ದಾರೆ.