ಐಸಿಸಿ ಮೆಗಾ ಕ್ರಿಕೆಟ್ ಈವೆಂಟ್‌ಗೆ ಕೆಲವೇ ತಿಂಗಳು ಬಾಕಿ. 2019ರ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿತ್ತು. ಭಾರತ ತವರಿನಲ್ಲಿ ಎರಡನೇ ಬಾರಿ ಮತ್ತು ಒಟ್ಟಾರೆ ಮೂರನೇ ಬಾರಿ ಟ್ರೋಫಿ ಗೆಲ್ಲಲು ಇದು ಮತ್ತೊಂದು ಸುವರ್ಣಾವಕಾಶ. ತವರಿನಲ್ಲಿ ನಡೆಯಲಿರುವ ಮೆಗಾ ಈವೆಂಟ್‌ನಲ್ಲಿ ಭಾರತ ಪ್ರಾಬಲ್ಯ ಮೆರೆಯಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ವಿಶ್ವಕಪ್ ನಿಗದಿಯಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೋತಿದ್ದರೂ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಲಿದೆ. ಸೀಮಿತ ಓವರ್‌ಗಳ ವಿಶ್ವಕಪ್ಗಾಗಿ ಅಜೇಯ ತಂಡ ಕಟ್ಟುವ ಅಗತ್ಯವೂ ಇದೆ. ಅಕ್ಟೋಬರ್ 8ರಂದು ಆಸೀಸ್ ವಿರುದ್ಧ ಭಾರತ ತನ್ನ ವಿಶ್ವಕಪ್ ಪ್ರವಾಸದ ಮೊದಲ ಪಂದ್ಯ ಆಡಲಿದೆ. ತಂಡವು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ.
ವಿರಾಟ್ ಕೊಹ್ಲಿ: ನಾಯಕನಾಗಿಲ್ಲದಿದ್ದರೂ ಕೊಹ್ಲಿ ಹಲವು ವರ್ಷಗಳಿಂದ ಆಟದ ಯಾವುದೇ ಸ್ವರೂಪದಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್ ಆಗುಳಿದಿದ್ದಾರೆ. ಮೂರನೇ ವಿಶ್ವಕಪ್ ಆಡುತ್ತಿರುವ ಅನುಭವಿ ಬ್ಯಾಟರ್ಗೆ ಇದೇ ಕೊನೆಯ ವಿಶ್ವಕಪ್ ಆಗಬಹುದು ಎಂದೂ ಹೇಳಲಾಗುತ್ತಿದೆ. ಹಿಂದಿನ ವಿಶ್ವಕಪ್ನ ಪಂದ್ಯದಲ್ಲಿ 53 ಬಾಲ್ಗೆ 82 ರನ್ ಗಳಿಸಿದ್ದು ಬ್ಯಾಟಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ವರ್ಷ ಅದ್ಭುತ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಅವರಿಂದ ರನ್ ಹೊಳೆ ಹರಿಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. 274 ಏಕದಿನ ಪಂದ್ಯದಲ್ಲಿ 265 ಇನ್ನಿಂಗ್ಸ್ ಆಡಿರುವ ವಿರಾಟ್ 46 ಶತಕಗಳನ್ನು ಗಳಿಸಿದ್ದು, 57.3 ರ ಸರಾಸರಿಯಲ್ಲಿ 12898 ರನ್ ಕಲೆಹಾಕಿದ್ದಾರೆ.
ರೋಹಿತ್ ಶರ್ಮಾ: ಮುಂಬೈ ಬ್ಯಾಟರ್ ರೋಹಿತ್ ಶರ್ಮಾ ನಿಸ್ಸಂದೇಹವಾಗಿ ದೇಶದ ಎರಡನೇ ಅತಿ ಹೆಚ್ಚು ಬೇಡಿಕೆಯ ಕ್ರಿಕೆಟಿಗ. ಇಂಗ್ಲೆಂಡ್‌ನಲ್ಲಿ ನಡೆದ ಕೊನೆಯ 50 ಓವರ್‌ಗಳ ವಿಶ್ವಕಪ್‌ನಲ್ಲಿ 5 ಶತಕಗಳನ್ನು ಬಾರಿಸಿ ಐಸಿಸಿ ಪ್ರತಿಷ್ಠಿತ ಪಂದ್ಯಗಳಲ್ಲಿ ಬೆಸ್ಟ್ ಬ್ಯಾಟರ್ ಎಂದು ಸಾಬೀತು ಮಾಡಿಕೊಂಡಿದ್ದಾರೆ. ಅವರು ವಿಶ್ವಕಪ್‌ನಲ್ಲಿ 65ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಆರು ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಮತ್ತು ರೋಹಿತ್ ಶರ್ಮಾ ಈ ವರ್ಷ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ತಮ್ಮ ಅನುಭವವನ್ನು ಧಾರೆ ಎರೆಯಬೇಕಿದೆ.