ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಫೈನಲ್​: ವಿರಾಟ್​ ಕೊಹ್ಲಿಗೆ ಪ್ಲೇಯರ್​ ಆಫ್​ ದಿ ಟೂರ್ನಮೆಂಟ್‌ ಪ್ರಶಸ್ತಿ - ಭಾರತ

Virat Kohli awarded Player of the Tournament: ಭಾರತದ ಬ್ಯಾಟರ್​ ವಿರಾಟ್​ ಕೊಹ್ಲಿ ಅವರು 2023ರ ಐಸಿಸಿ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಪ್ಲೇಯರ್​ ಆಫ್​ ದಿ ಟೂರ್ನಮೆಂಟ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Virat Kohli
ವಿರಾಟ್​ ಕೊಹ್ಲಿ

By ETV Bharat Karnataka Team

Published : Nov 19, 2023, 11:07 PM IST

ಅಹಮದಾಬಾದ್ (ಗುಜರಾತ್​): ಐಸಿಸಿ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಭಾರತದ ಬ್ಯಾಟರ್​ ವಿರಾಟ್​ ಕೊಹ್ಲಿ ಪ್ಲೇಯರ್​ ಆಫ್​ ದಿ ಟೂರ್ನಮೆಂಟ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರು ಕೂಡ ಕೊಹ್ಲಿ ಟೂರ್ನಿಯಲ್ಲಿ ಅತ್ಯಧಿಕ 765 ರನ್​ಗಳನ್ನು ಸಿಡಿಸಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಆರು ವಿಕೆಟ್​ಗಳಿಂದ ಜಯ ದಾಖಲಿಸಿದೆ. ಇದರಿಂದ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಟೀಂ ಇಂಡಿಯಾದ ಕನಸು ನುಚ್ಚುನೂರಾಗಿದೆ. ಮತ್ತೊಂದೆಡೆ, ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಸೀಸ್ ತಂಡ ಆರನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ತಂಡ ಸೋಲು ಕಂಡರೂ ವಿರಾಟ್​ ಕೊಹ್ಲಿ 54 ರನ್​ಗಳನ್ನು ಬಾರಿಸಿದ್ದರು. ಇದರೊಂದಿಗೆ ಟೂರ್ನಮೆಂಟ್‌ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು.

ಪ್ರಸ್ತುತ ವಿಶ್ವಕಪ್‌ ಟೂರ್ನಿಯಲ್ಲಿ ರನ್​ ಮಿಷನ್​ ಖ್ಯಾತಿಯ ವಿರಾಟ್ 11 ಇನ್ನಿಂಗ್ಸ್​ನಲ್ಲಿ 95.62ರ ಸರಾಸರಿಯಲ್ಲಿ 90.31 ಸ್ಟ್ರೈಕ್​ರೇಟ್​ನೊಂದಿಗೆ 765 ರನ್ ಕಲೆಹಾಕಿದ್ದರು. ತಮ್ಮ ಬ್ಯಾಟಿಂಗ್​ನಲ್ಲಿ ಮೂರು ಶತಕಗಳು ಮತ್ತು ಆರು ಅರ್ಧಶತಕಗಳನ್ನು ಸಹ ಒಳಗೊಂಡಿವೆ. ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ರನ್ ಕೂಡ ಇದಾಗಿದೆ. 2003ರಲ್ಲಿ ಸಚಿನ್​ ತೆಂಡೂಲ್ಕರ್​ ಗಳಿಸಿದ 673 ರನ್​ಗಳೇ ವಿಶ್ವಕಪ್‌ನಲ್ಲಿ ದಾಖಲಿದ ವೈಯಕ್ತಿಕ ಅತ್ಯಧಿಕ ದಾಖಲಾಗಿತ್ತು. ಈ ದಾಖಲೆಯನ್ನು ವಿರಾಟ್​ ಸೆಮೀಸ್​ ಪಂದ್ಯದಲ್ಲಿ ಮುರಿದ್ದರು. ಜೊತೆಗೆ ಈ ಟೂರ್ನಿಯಲ್ಲಿ ಒಂದು ವಿಕೆಟ್​ ಕೂಡ ಕೊಹ್ಲಿ ಪಡೆದಿದ್ದಾರೆ.

ವಿಶ್ವಕಪ್​ನಲ್ಲಿ ಎರಡು ಬಾರಿ ಸತತವಾಗಿ ಐದು ಬಾರಿ 50ಕ್ಕೂ ಹೆಚ್ಚು ಸ್ಕೋರ್‌ ಮಾಡಿದ ಬ್ಯಾಟರ್​ ವಿರಾಟ್​ ಕೊಹ್ಲಿ ಕೂಡ ಆಗಿದ್ದಾರೆ. 2019ರ ಟೂರ್ನಿಯಲ್ಲೂ ವಿರಾಟ್​ ಸತತ 50ಕ್ಕೂ ಅಧಿಕ ರನ್​ ಗಳಿಸಿದ್ದಾರೆ.

1992ರಿಂದ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆಟಗಾರರು:ವಿಶ್ವಕಪ್‌ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಹಲವು ಆಟಗಾರರು ಭಾಜನರಾಗಿದ್ದಾರೆ. 1992ರಲ್ಲಿ ಮಾರ್ಟಿನ್ ಕ್ರೋವ್, 1996ರಲ್ಲಿ ಸನತ್ ಜಯಸೂರ್ಯ, 1999ರಲ್ಲಿ ಲ್ಯಾನ್ಸ್ ಕ್ಲೂಸೆನರ್, 2003ರಲ್ಲಿ ಸಚಿನ್ ತೆಂಡೂಲ್ಕರ್, 2007ರಲ್ಲಿ ಗ್ಲೆನ್ ಮೆಕ್‌ಗ್ರಾತ್, 2011ರಲ್ಲಿ ಯುವರಾಜ್ ಸಿಂಗ್, 2015ರಲ್ಲಿ ಮಿಚೆಲ್ ಸ್ಟಾರ್ಕ್, 2019ರಲ್ಲಿ ಕೇನ್ ವಿಲಿಯಮ್ಸನ್ ಪ್ಲೇಯರ್​ ಆಫ್​ ದಿ ಟೂರ್ನಮೆಂಟ್‌ ಪ್ರಶಸ್ತಿಯನ್ನು ಪಡೆದಿದ್ದರು.

ABOUT THE AUTHOR

...view details