ನವದೆಹಲಿ:ಮುಂಬರುವಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಪಂದ್ಯಾವಳಿಗೂ ಮುನ್ನ ಬಲಿಷ್ಠ ಕ್ರಿಕೆಟ್ ತಂಡ ಯಾವುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಂಕಿ-ಅಂಶಗಳನ್ನು ನೋಡಿದರೆ ಭಾರತ ತಂಡವೇ ಪ್ರಬಲವಾಗಿ ಕಾಣುತ್ತಿದೆ. ಟೀಂ ಇಂಡಿಯಾದ ಜೊತೆಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳೂ ಕೂಡಾ ಬಲಿಷ್ಠವಾಗಿವೆ.
2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪಿತ್ತು. ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ 18 ರನ್‌ಗಳಿಂದ ಗೆಲುವು ಸಾಧಿಸಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೇರಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ಸೂಪರ್ ಓವರ್ ಮೂಲಕ ವಿಶ್ವಕಪ್ ಕಿರೀಟ ಗೆದ್ದುಕೊಂಡಿತ್ತು.
ಭಾರತದಲ್ಲಿ ನಡೆಯಲಿರುವ 2023ರ ವಿಶ್ವಕಪ್‌ಗೆ ಭಾರತ-ಪಾಕಿಸ್ತಾನದೊಂದಿಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಪ್ರಬಲ ಎಂದು ಪರಿಗಣಿಸಲಾದರೂ, ಭಾರತದ ಪಿಚ್ ಬಾಂಗ್ಲಾ ಮತ್ತು ಶ್ರೀಲಂಕಾ ತಂಡಗಳಿಗೆ ನೆರವಾಗಲಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತೋರಿದ ಸಾಧನೆ ಮರುಕಳಿಸುವ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿದೆ. 2019 ರ ವಿಶ್ವಕಪ್ ನಂತರ ಭಾರತ ಕಳೆದ 5 ವರ್ಷಗಳಲ್ಲಿ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ.