ನವದೆಹಲಿ: ಮುಂಬರುವ ಪುರುಷರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಬದಲಾಯಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಗುರುವಾರ ಹೇಳಿದ್ದಾರೆ. ಈ ಬದಲಾವಣೆಯಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯವನ್ನು ಅವರು ಉಲ್ಲೇಖಿಸಿಲ್ಲ. ಈ ಸಂದರ್ಭದಲ್ಲಿ, ಜಯ್ ಶಾ ವಿಶ್ವಕಪ್‌ನ ಮೂಲ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಕಾಣುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. ಆದರೆ, ಇಂತಹುದೇ ಪಂದ್ಯಗಳು ಎಂದು ತಿಳಿಸಿಲ್ಲ. ಯಾವುದೇ ಬದಲಾವಣೆಗಳನ್ನು ಮಾಡಬೇಕಾಗಿದ್ದರೂ ಅದನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಇದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಏಕದಿನ ವಿಶ್ವಕಪ್ ಆತಿಥ್ಯ ವಹಿಸುವ ರಾಜ್ಯಗಳ ಸ್ಥಳಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎಲ್ಲ ರಾಜ್ಯಗಳ ಪರಿಸ್ಥಿತಿ ಕುರಿತು ಚರ್ಚಿಸಿ ಕೆಲವು ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಪ್ರೇಕ್ಷಕರಿಗೆ ದಿನಾಂಕ ಹಾಗೂ ಪಂದ್ಯದ ಸಮಯದ ಬಗ್ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಏಕದಿನ ವಿಶ್ವಕಪ್ ಆತಿಥ್ಯ ವಹಿಸುವ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದು ಗುಜರಾತ್ ಪೊಲೀಸ್ ಮೂಲಗಳು ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಅಕ್ಟೋಬರ್ 15 ರಂದು ಭಾರತ - ಪಾಕಿಸ್ತಾನ ಪಂದ್ಯದ ದಿನಾಂಕ ಬದಲಾವಣೆಯ ಬಗ್ಗೆಯೂ ಚರ್ಚಿಸುತ್ತೇವೆ. ಏಕೆಂದರೆ ನವರಾತ್ರಿಯ ಮೊದಲ ದಿನ ಅಹಮದಾಬಾದ್‌ನಲ್ಲಿ ವಿಶ್ವಕಪ್‌ನ ಈ ಮಹತ್ವದ ಪಂದ್ಯ ನಡೆಯಲಿದೆ. ಆ ದಿನ ಭದ್ರತೆಯನ್ನು ನೋಡಿಕೊಳ್ಳುವುದು ತುಂಬಾ ಕಷ್ಟ ಎಂದಿದ್ದಾರೆ. ಸ್ಥಳೀಯ ಪೊಲೀಸರು ಬಿಸಿಸಿಐಗೆ ಈ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಲಿದ್ದಾರೆ. ಅದಕ್ಕಾಗಿಯೇ ಈ ಪಂದ್ಯದ ದಿನಾಂಕವನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.