ಹೈದರಾಬಾದ್: 10 ವರ್ಷಗಳಿಂದ ಐಸಿಸಿ ಟ್ರೋಫಿ ಇಲ್ಲದ ಬರವನ್ನು ಈ ಬಾರಿ ಟೀಮ್ ಇಂಡಿಯಾ ನೀಗಿಸುತ್ತದೆ ಎಂಬುದು 140 ಕೋಟಿ ಭಾರತೀಯ ಹೃದಯಗಳ ಅಪೇಕ್ಷೆ. ಕ್ರಿಕೆಟ್ನ ಎಲ್ಲ ಸ್ವರೂಪಗಳಲ್ಲಿ ನಂ.1 ತಂಡ, ಅದ್ಭುತ ಫಾರ್ಮ್ನಲ್ಲಿರುವ 11ರ ಬಳಗ, ತವರು ಮೈದಾನದ ಅನುಕೂಲತೆ, ನಿರ್ಭೀತ ಯುವ ಆಟಗಾರರು, ಏಷ್ಯಾಕಪ್ ಚಾಂಪಿಯನ್, ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಬಲ, ಬಲಿಷ್ಠ ಅನುಭವಿಗಳು... ಇವೆಲ್ಲವೂ ದೇಸಿ ನೆಲದಲ್ಲಿ ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಆಕಾಂಕ್ಷೆಯನ್ನು ನೂರ್ಮಡಿಸಿವೆ.
ತಂಡದಲ್ಲಿ ಭರವಸೆಯ ಯುವ ಆಟಗಾರರ ಜೊತೆಗೆ, ಅನುಭವಿ ಹಿಟ್ಮ್ಯಾನ್ ರೋಹಿತ್ ಶರ್ಮಾ, ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಆಲ್ರೌಂಡರ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬಲವಿದೆ. ಇದರಿಂದಾಗಿ ಭಾರತ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೆವ್ರೀಟ್ ತಂಡವಾಗಿದೆ.
ಇಂಗ್ಲೆಂಡ್, ಆಸ್ಟ್ರೇಲಿಯಾದಂತೆ ಭಾರತವೂ ತನ್ನ ಆಡುವ 11ರ ಬಳಗವನ್ನು ಬಲಿಷ್ಠ ಮಾಡಿಕೊಂಡಿದೆ. ಅಲ್ಲದೇ ಆಲ್ರೌಂಡರ್ಗಳ ಸಂಖ್ಯೆ ತಂಡದಲ್ಲಿ ಹೆಚ್ಚಿದೆ. ಇದರಿಂದ 8ನೇ ಕ್ರಮಾಂಕದ ಆಟಗಾರನವರೆಗೂ ತಂಡದಲ್ಲಿ ಬ್ಯಾಟಿಂಗ್ ಬಲವಿದೆ. ಬೌಲಿಂಗ್ನಲ್ಲಿ ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಶಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಮಾರಕ ಅಸ್ತ್ರವಾಗಿದ್ದಾರೆ. ಇನ್ನು ಟೀಂ ಇಂಡಿಯಾದ ಪ್ರಮುಖ ಮತ್ತು ವಿಭಿನ್ನ ಸಾಮರ್ಥ್ಯಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...
ಬ್ಯಾಟಿಂಗ್ ಲೈನ್ ಅಪ್:
ವಿರಾಟ್ ಕೊಹ್ಲಿ:ಎರಡು ವರ್ಷಗಳ ಹಿಂದೆ ರನ್ ಗಳಿಸಲು ಪರದಾಡುತ್ತಿದ್ದ ವಿರಾಟ್ 2023ರಲ್ಲಿ ಫಾರ್ಮ್ಗೆ ಮರಳಿದರು. ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 5 ಶತಕ ಗಳಿಸಿ ಫಾರ್ಮ್ನಲ್ಲಿದ್ದಾರೆ. ಏಷ್ಯಾಕಪ್ನಲ್ಲಿ ವಿರಾಟ್ ಪಾಕಿಸ್ತಾನದ ವಿರುದ್ಧ ಶತಕ ದಾಖಲಿಸಿ ವಿಶ್ವಕಪ್ಗೆ ತಿಂಗಳು ಬಾಕಿ ಇರುವಾಗ ತಮ್ಮ ಬ್ಯಾಟ್ ಮತ್ತೆ ಸಾಣೆ ಹಿಡಿದಿದ್ದಾರೆ ಎಂದರೆ ತಪ್ಪಾಗದು. ಏಕದಿನ ಕ್ರಿಕೆಟ್ನಲ್ಲಿ ಇನ್ನು ಎರಡು ಶತಕ ದಾಖಲಾದರೆ ಕ್ರಿಕೆಟ್ ದೇವರು ಸಚಿನ್ ಅವರ ದಾಖಲೆ ಮುರಿಯಲಿದ್ದಾರೆ. ಇದು ಈ ವಿಶ್ವಕಪ್ನಲ್ಲಿ ಆಗುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ:2019 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಕ್ಯಾಫ್ಟನ್ ರೋಹಿತ್ ಶರ್ಮಾ, ಐಸಿಸಿ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ರೆಕಾರ್ಡ್ ಇಟ್ಟುಕೊಂಡು ನಾಯಕತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆರಂಭಿಕರಾಗಿ ತಂಡಕ್ಕೆ ಹಲವು ವರ್ಷಗಳಿಂದ ರೋಹಿತ್ ಆಸರೆಯಾಗಿದ್ದಾರೆ. ಮೊದಲ ಬಾಲ್ನ್ನು ಸಿಕ್ಸ್ಗೆ ಅಟ್ಟುವ ಸಾಮರ್ಥ್ಯ ಮತ್ತು ಭಾರತದ ಪರ ಅತಿ ಹೆಚ್ಚು ಸಿಕ್ಸ್ ದಾಖಲಿಸಿರುವ ರೋಹಿತ್ ಅವರನ್ನು "ಹಿಟ್ಮ್ಯಾನ್" ಎಂದೇ ಕರೆಯಲಾಗುತ್ತದೆ.
ಶುಭಮನ್ ಗಿಲ್: ಸ್ಟೈಲಿಶ್ ಲುಕ್ನಿಂದ ಯುವತಿಯರ ಮನ ಗೆದ್ದಿರುವ ಗಿಲ್, ತಮ್ಮ ಆಟದ ಶೈಲಿಯಿಂದ ಕ್ರಿಕೆಟ್ ದಿಗ್ಗಜರ ಮೆಚ್ಚುಗೆ ಗಳಿಸಿದ್ದಾರೆ. ಅವರ ಪ್ರತಿ ಹೊಡೆತದಲ್ಲಿರುವ ಸ್ಪಷ್ಟತೆ ಅವರನ್ನು ಪ್ರಿನ್ಸ್ ಎಂದು ಕರೆಯಲು ಕಾರಣವಾಗಿದೆ. ವಿರಾಟ್ ಕೊಹ್ಲಿಯ ರೀತಿಯಲ್ಲಿ ಪ್ರತಿ ಬಾಲ್ ಅನ್ನು ಅವರು ಎದುರಿಸುವುದರಿಂದ ಅನೇಕ ಅನುಭವಿಗಳು ತಂಡದಲ್ಲಿ ಗಿಲ್, ಕಿಂಗ್ ಕೊಹ್ಲಿಯ ಜಾಗ ತುಂಬಲಿದ್ದಾರೆ ಎನ್ನುತ್ತಾರೆ. ಅದನ್ನು ಅವರು ಆಗಾಗ ತಮ್ಮ ರನ್ ಗಳಿಕೆಯ ಮೂಲಕ ಸಾಬೀತು ಮಾಡಿದ್ದಾರೆ.
ಸೂರ್ಯ ಕುಮಾರ್ ಯಾದವ್: ಏಕದಿನ ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡು, ಮೂರು ಬಾರಿ ಡಕ್ಗೆ ಔಟ್ ಆಗಿ ಟೀಕೆ ಮತ್ತು ಟ್ರೋಲ್ಗೆ ಒಳಗಾದ ಟಿ20ಯ ಟಾಪ್ ಬ್ಯಾಟರ್. ಸ್ಕೈ ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್ ಅನುಪಸ್ಥಿತಿಯನ್ನು ತುಂಬಬಲ್ಲೆ ಎಂಬುದುನ್ನು ತೋರಿಸಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್ನಲ್ಲೂ ಟಿ20ಯಂತೆ ಬಿರುಸಿನ ಬ್ಯಾಟ್ ಬೀಸಿ, ಎಬಿಡಿ ಅವರಂತೆ 360 ಡಿಗ್ರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಕೆಎಲ್ ರಾಹುಲ್: ಕಳಪೆ ಫಾರ್ಮ್ನಿಂದ ನಿಂದನೆ ಎದುರಿಸಿ, ಐಪಿಎಲ್ ವೇಳೆ ಗಾಯಗೊಂಡ ನಂತರ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕನ್ನಡಿಗ ಕೆ ಎಲ್ ರಾಹುಲ್ ಟೀಕೆಗಳಿಗೆ ಲಂಕಾದಲ್ಲಿ ನಡೆದ ಏಷ್ಯಾಕಪ್ನಲ್ಲಿ ಉತ್ತರ ಕೊಟ್ಟರು. ಅಲ್ಲದೇ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದೇನೆ ಎಂಬುದಕ್ಕೆ ಕೀಪಿಂಗ್ ಸಹಿತ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇವರ ಕಮ್ಬ್ಯಾಕ್ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದೆ. ಹೋಮ್ ಗ್ರೌಂಡ್ನಲ್ಲಿ ರನ್ ಮಳೆ ಸುರಿಸುತ್ತಾರೆ ಎಂಬ ಭರವಸೆ ಇವರ ಮೇಲಿದೆ.
ಶ್ರೇಯಸ್ ಅಯ್ಯರ್:ಅಯ್ಯರ್, ರಾಹುಲ್, ಪಂತ್ ಅವರು ಒಮ್ಮೆಗೆ ಗಾಯಗೊಂಡು ತಂಡದಿಂದ ಹೊರಗುಳಿದ ಕಾರಣ ಏಕದಿನ ತಂಡ ದುರ್ಬಲವಾಗಿ ಕಾಣಿಸಿಕೊಳ್ಳುತ್ತಿತ್ತು. ಇಬ್ಬರು ಮರಳಿದ್ದಾರೆ. ಅಯ್ಯರ್ ಆಸ್ಟ್ರೇಲಿಯಾ ವಿರುದ್ಧ ಶತಕ ದಾಖಲಿಸಿ ತಮ್ಮ ಮರಳುವಿಕೆಯನ್ನು ತೋರಿಸಿದ್ದಾರೆ. ವಿಶ್ವಕಪ್ಗೂ ಮುನ್ನ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.