ಕೋಲ್ಕತ್ತಾ (ಪಶ್ಚಿಮ ಬಂಗಾಳ): ಟೀಮ್ ಇಂಡಿಯಾದ ಮಾಜಿ ನಾಯಕ, ವಿಶ್ವ ಖ್ಯಾತಿಯ ಆಟಗಾರ ವಿರಾಟ್ ಕೊಹ್ಲಿ ಜನ್ಮದಿನದಂದು ವಿಶ್ವಕಪ್ ಪಂದ್ಯ ನಡೆಯಲಿರುವ ಕಾರಣ ವಿಶೇಷ ಆಚರಣೆಗೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸಿದ್ಧತೆ ನಡೆಸಿದೆ. ನವೆಂಬರ್ 5ರಂದು ಕಿಂಗ್ ಕೊಹ್ಲಿ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಂದು ಕೋಲ್ಕತ್ತಾದ ಈಡನ್ಗಾರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ಎದುರಿಸಲಿದೆ.
ಹೀಗಾಗಿ ಮೈದಾನಕ್ಕೆ ಬರುವ ಅಭಿಮಾನಿಗಳೊಂದಿಗೆ ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಜನ್ಮದಿನ ಆಚರಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ನಿರ್ಧರಿಸಿದೆ. ಬಾಲಿವುಡ್ ಗಾಯಕಿ ಶಿಲ್ಪಾ ರಾವ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಲ್ಪಾ ಇತ್ತೀಚೆಗೆ 'ಜವಾನ್' ಚಿತ್ರದ 'ಚಲೇಯ' ಹಾಡು ಹಾಡಿದ್ದು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಶಿಲ್ಪಾ ಜನಪ್ರಿಯ ಹಿಂದಿ ಚಲನಚಿತ್ರಗಳಾದ 'ಬಚ್ನಾ ಏ ಹಸೀನೋ', 'ಧೂಮ್ 3' ಮತ್ತು ಚಿತ್ರಗಳಲ್ಲಿ ಹಾಡಿದ್ದಾರೆ.
ವಿರಾಟ್ ಜನ್ಮದಿನದ ಪ್ರಯುಕ್ತ ಸಂಗೀತ ಕಾರ್ಯಕ್ರಮದ ಜೊತೆಗೆ ಲೇಸರ್ ಲೈಟ್ ಪ್ರದರ್ಶನ, ಕ್ರೀಡಾಂಗಣದ ಮೇಲೆ ಅದ್ಭುತವಾದ ಪಟಾಕಿ ಪ್ರದರ್ಶನ. ಹಾಗೆಯೇ ಮೈದಾನದಲ್ಲಿ ವಿಶೇಷವಾಗಿ ಕೇಕ್ ಕತ್ತರಿಸುವ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ಈ ಎಲ್ಲಾ ವಿಚಾರಗಳನ್ನು ಐಸಿಸಿ ಮುಂದೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸಲ್ಲಿಸಿದ್ದು ಇದಕ್ಕೆ ಒಪ್ಪಿಗೆ ಇನ್ನಷ್ಟೇ ಸಿಗಬೇಕಿದೆ.