ಅಹಮದಾಬಾದ್:ಭಾರತದಲ್ಲಿ ಕ್ರಿಕೆಟ್ ಬರೀ ಜ್ವರವಲ್ಲ, ಅದು ಎಂದಿಗೂ ಗುಣಮುಖವಾಗದ ಕಾಯಿಲೆ ಇದ್ದ ಹಾಗೆ. ಅದೆಷ್ಟೇ ದುಬಾರಿಯಾದ್ರೂ, ಎಷ್ಟೇ ದೂರವಿದ್ದರೂ ಸರಿ ಭಾರತದ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಗುಜರಾತ್ನ ಅಹಮದಾಬಾದ್ ಸಜ್ಜಾಗಿದ್ದು, ಅಲ್ಲಿನ ಹೋಟೆಲ್ಗಳ ರೂಮ್, ಪ್ರಯಾಣ ದರಗಳು ಗಗನಮುಖಿಯಾಗಿವೆ.
ಎರಡು ಮದಗಜಗಳ ಆಟ ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ದೇಶ, ವಿದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಎಷ್ಟೇ ಖರ್ಚಾದರೂ ಸರಿ ಪಂದ್ಯ ವೀಕ್ಷಿಸಬೇಕು ಎಂಬ ಅಭಿಮಾನಿಗಳ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಹಮದಾಬಾದ್‌ನಲ್ಲಿ ಹೋಟೆಲ್‌ಗಳು ರೂಮ್ಗಳ ದರವನ್ನು ವಿಪರೀತ ಹೆಚ್ಚಿಸಿವೆ. 2 ಸಾವಿರ ರೂಪಾಯಿ ಇರುವ ಕೊಠಡಿಗಳ ಬಾಡಿಗೆಯನ್ನು ಏಕಾಏಕಿ 50 ಸಾವಿರಕ್ಕೆ ಹೆಚ್ಚಿಸಿವೆ.
ವಿದೇಶಿಗರಿಗೆ ವಿಶೇಷ ಸ್ವಾಗತ:ಫೈನಲ್ ಪಂದ್ಯ ವೀಕ್ಷಿಸಲು ಆಗಮಿಸುತ್ತಿರುವ ವಿದೇಶಿ ಕ್ರಿಕೆಟ್ ಅಭಿಮಾನಿಗಳ ಸ್ವಾಗತಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಡ್ರಮ್ ಮತ್ತು ಗಾರ್ಬಾದೊಂದಿಗೆ ಅವರನ್ನು ಸ್ವಾಗತಿಸಲಾಗುತ್ತಿದೆ. ಜೊತೆಗೆ ವಿಮಾನ ನಿಲ್ದಾಣದಲ್ಲಿ ವಿಶ್ವಕಪ್‌ನ ಪ್ರತಿಕೃತಿಯನ್ನೂ ಅಳವಡಿಸಲಾಗಿದೆ. ಅಮೆರಿಕದಿಂದ 16 ಕ್ರಿಕೆಟ್ ಅಭಿಮಾನಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶನಿವಾರ ಬೆಳಗ್ಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಾಳಿನ ಪಂದ್ಯದಲ್ಲಿ ಭಾರತ ಗೆಲ್ಲಲಿದೆ ಎಂಬುದು ಅವರ ವಿಶ್ವಾಸ.