ಕೇಪ್ಟೌನ್( ದಕ್ಷಿಣ ಆಫ್ರಿಕಾ): ಪಾಕಿಸ್ತಾನದ ಎದುರು ಜಯ ಸಾಧಿಸಿದ ಭಾರತೀಯ ವನಿತೆಯರು ವೆಸ್ಟ್ ಇಂಡೀಸ್ ಎದುರು ಇಂದು ಕಣಕ್ಕಿಳಿದಿದ್ದು, ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡಿಯನ್ಸ್ನ್ನು 118 ರನ್ಗೆ ಭಾರತೀಯ ವನಿತೆಯರು ಕಟ್ಟಿಹಾಕಿದ್ದಾರೆ. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ದೀಪ್ತಿ ಶರ್ಮಾ ಟಿ20 ವಿಭಾಗದಲ್ಲಿ 100 ಪಡೆದ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ.
ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಪೂಜಾ ವಸ್ತ್ರಾಕರ್ ಕಾಡಿದರು. ಎರಡನೇ ಓವರ್ನಲ್ಲೇ ನಾಯಕಿ ಹೇಲಿ ಮ್ಯಾಥ್ಯೂಸ್ (2) ಅವರನ್ನು ಔಟ್ ಮಾಡಿದರು. ನಂತರದ ಜೋಡಿ ಸ್ಟಾಫಾನಿ ಟೇಲರ್ ಮತ್ತು ಶೆಮೈನ್ ಕ್ಯಾಂಪ್ಬೆಲ್ಲೆ 73 ರನ್ಗಳ ಜೊತೆಯಾಟ ನೀಡಿದರು. 30 ರನ್ ಗಳಿಸಿ ಆಡುತ್ತಿದ್ದ ಶೆಮೈನ್ ಕ್ಯಾಂಪ್ಬೆಲ್ಲೆ ಅವರನ್ನು ದೀಪ್ತಿ ಶರ್ಮಾ ಔಟ್ ಮಾಡುವ ಮೂಲಕ ಜೊತೆಯಾಟ ಮುರಿದರು. ಚಿನೆಲ್ಲೆ ಹೆನ್ರಿ ಅವರು ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಸೇರಿ ಮಾಡಿದ ರನ್ ಔಟ್ಗೆ ಬಲಿಯಾದರು. 42 ರನ್ ಗಳಿಸಿ ಆಡುತ್ತಿದ್ದ ಸ್ಟಾಫಾನಿ ಟೇಲರ್ ದೀಪ್ತಿ ಶರ್ಮಾರ ಎಲ್ಬಿಡ್ಲ್ಯೂಗೆ ಬಲಿಯಾದರು.
ಶಬಿಕಾ ಗಜ್ನಾಬಿ ಮತ್ತು ಚೆಡಿಯನ್ ನೇಷನ್ ಕೊಂಚ ಹೊತ್ತು ಕ್ರೀಸ್ ಕಾಯ್ದುಕೊಂಡರಾದರೂ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. 15 ರನ್ ಗೆ ಚೆಡಿಯನ್ ನೇಷನ್ ಔಟ್ ಆದರು. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್. ರೇಣುಕಾ ಠಾಕೂರ್ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.