ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳು ನಿನ್ನೆಯಿಂದ(ಶನಿವಾರ) ಪ್ರಾರಂಭವಾಗಿವೆ. ಕಳೆದ ಬಾರಿ ಫೈನಲ್ನಲ್ಲಿ ಸೋಲುಂಡಿದ್ದ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲಲು ತವಕಿಸುತ್ತಿದೆ. ಈ ನಿಟ್ಟಿನಲ್ಲಿ ಇಂದು ತಮ್ಮ ಮೊದಲ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಬಳಗ ಬದ್ಧವೈರಿ ಪಾಕಿಸ್ತಾನದ ಜತೆ ಸೆಣಸಾಡಲಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಲ್ಲೇ ತ್ರಿಕೋನ ಸರಣಿ ನಡೆದಿದ್ದು ಭಾರತ ತಂಡ ಭಾಗಿಯಾಗಿತ್ತು.
ಇಂದು ಸಂಜೆ ಕೇಫ್ಟೌನ್ನ ನ್ಯೂಲ್ಯಾಂಡ್ ಸ್ಟೇಡಿಯಂನಲ್ಲಿ ಭಾರತ- ಪಾಕ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳಲ್ಲಿ ಬ್ಯಾಟಿಂಗ್, ಬೌಲಿಂಗ್ ಸಾಧನೆಗಳ ಅಂಕಿಅಂಶಗಳನ್ನು ಗಮನಿಸಿದರೆ ಭಾರತವೇ ಬಲಿಷ್ಠವಾಗಿದೆ. ಪಾಕ್ ಬ್ಯಾಟಿಂಗ್ನಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಹೀಗಿದ್ದರೂ ಸಂಪ್ರದಾಯಕ ವೈರಿಯನ್ನು ಮಣಿಸಲು 'ಭಾರತೀ'ಯರು ಸಾಕಷ್ಟು ಪೂರ್ವತಯಾರಿ ಮಾಡಿಕೊಂಡೇ ಕಣಕ್ಕಿಳಿಯುತ್ತಿದ್ದಾರೆ.
ಇದನ್ನೂ ಓದಿ:ಮಹಿಳಾ ಟಿ 20 ವಿಶ್ವಕಪ್: ಆಸ್ಟ್ರೇಲಿಯಾ ತಂಡ ಪಾರಮ್ಯ, ಪ್ರಶಸ್ತಿ ಗೆಲ್ತಾರಾ ಭಾರತದ ವನಿತೆಯರು?
ಈವರೆಗಿನ ಎಲ್ಲ ಐಸಿಸಿ ಟೂರ್ನಿಗಳಲ್ಲೂ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ದಾಖಲೆ ಹೊಂದಿರುವ ಪಾಕ್ ಇಂದು ಮೊದಲ ಜಯದೊಂದಿಗೆ ಟೂರ್ನಿ ಆರಂಭಿಸುವ ಉತ್ಸುಕತೆಯಲ್ಲಿದೆ. ಇನ್ನು ಭಾರತದ ಪ್ರಮುಖ ಬ್ಯಾಟರ್, ಗಾಯಾಳುವಾಗಿರುವ ಸ್ಮೃತಿ ಮಂಧಾನ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಶಫಾಲಿ, ಜೆಮಿಮಾ, ದೀಪ್ತಿ ಹಾಗೂ ರೇಣುಕಾ ಸೇರಿದಂತೆ ಪ್ರಮುಖ ಆಟಗಾರರರು ತಂಡದಲ್ಲಿದ್ದಾರೆ. ಪಾಕಿಸ್ತಾನ ನಿದಾ ದಾರ್ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ತಂಡವನ್ನು ಬಿಸ್ಮಾ ಮಹರೂಫ್ ಮುನ್ನಡೆಸುತ್ತಿದ್ದಾರೆ.
ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಲಂಕಾ, ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಗೆದ್ದು ಶುಭಾರಂಭ ಮಾಡಿವೆ.