ಗೆಬ್ರಾಹ್(ದಕ್ಷಿಣ ಆಫ್ರಿಕಾ):ಬೆಂಕಿ ಚೆಂಡಿನಂತೆ ದಾಳಿ ಮಾಡಿದ ರೇಣುಕಾ ಸಿಂಗ್, ಮಿಂಚಿನ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ, ರಿಚಾ ಘೋಷ್ರ ಅದ್ಭುತ ಪ್ರದರ್ಶನ ಹೊರತಾಗಿಯೂ ಭಾರತ ವನಿತೆಯರು ಇಂಗ್ಲೆಂಡ್ ಮಹಿಳೆಯರ ವಿರುದ್ಧ ಸೋಲು ಕಂಡರು. ಇದು ಈ ಸಾಲಿನ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪರಾಜಯವಾಗಿದೆ.
ಮೊದಲು ಬ್ಯಾಟ್ ಮಾಡಿದ ಆಂಗ್ ವನಿತೆಯರು ನೀಡಿದ 151 ರನ್ಗಳ ಗುರಿ ಬೆನ್ನಟ್ಟಿದ ಭಾರತದ ನಾರಿಯರು 140 ರನ್ಗಳಿಸಲಷ್ಟೇ ಶಕ್ತರಾಗಿ 11 ರನ್ಗಳ ಸೋಲು ಕಂಡರು. ಬಲಿಷ್ಠ ಆಂಗ್ಲ ಮಹಿಳೆಯರು 3 ಆಡಿದ 3 ಪಂದ್ಯಗಳಲ್ಲಿ ಗೆದ್ದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾದರು. ಅಷ್ಟೇ ಪಂದ್ಯವಾಡಿರುವ ಭಾರತ 2 ರಲ್ಲಿ ಗೆಲುವು 1 ಸೋಲು ಮೂಲಕ 2ನೇ ಸ್ಥಾನದಲ್ಲಿದೆ.
ಟಾಸ್ ಗೆದ್ದರೂ ಬೌಲಿಂಗ್ ಆಯ್ದಕೊಂಡ ಭಾರತ, ಆಂಗ್ಲ ಮಹಿಳೆಯರನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ನಾಯಕಿಯ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ವೇಗಿ ರೇಣುಕಾ ಸಿಂಗ್ ಮೊದಲ ಓವರ್ನಲ್ಲೇ ಪೆಟ್ಟು ನೀಡಿದರು. ಡೇನಿಯಲ್ ವ್ಯಾಟ್ರನ್ನು ಸೊನ್ನೆಗೆ ಔಟ್ ಮಾಡಿದರು. ಇದಾದ ಬಳಿಕ 3 ನೇ ಓವರ್ನಲ್ಲಿ ಅಲಿಸಿ ಕ್ಯಾಪ್ಸೆ ವಿಕೆಟ್ ಕಿತ್ತು ಅದ್ಭುತ ಆರಂಭ ನೀಡಿದರು.
ಇದಾದ ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆಗೆ ರೇಣುಕಾ ಪೆವಿಲಿಯನ್ ದಾರಿ ತೋರಿಸಿದರು. 29 ರನ್ಗೆ 3 ಕಳೆದುಕೊಂಡ ಆಂಗ್ಲ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಮೈದಾನಕ್ಕಿಳಿದ ನ್ಯಾಟ್ ಸ್ಕಿವರ್ ಬರ್ನ್ಟ್ ಅರ್ಧಶತಕ ಗಳಿಸಿದರು. 42 ಎಸೆತ ಎದುರಿಸಿದ ಸ್ಕಿವರ್ 5 ಬೌಂಡರಿ ಬಾರಿಸಿದರು. ನಾಯಕಿ ಹೀತರ್ ನೈಟ್ 28, ಆ್ಯಮಿ ಜೋನಸ್ 3 ಬೌಂಡರಿ, 2 ಸಿಕ್ಸರ್ ಸಮೇತ ಮಿಂಚಿನ ಬ್ಯಾಟ್ ಮಾಡಿ 40 ರನ್ ಗಳಿಸಿದರು. ನಿಗದಿತ 20 ಓವರ್ಗಳಲ್ಲಿ ಇಂಗ್ಲೆಂಡ್ 7 ವಿಕೆಟ್ಗೆ 151 ರನ್ಗಳ ಸ್ಪರ್ಧಾತ್ಮ ಮೊತ್ತ ಗಳಿಸಿತು.