ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಐಸಿಸಿ ಮಹಿಳಾ ಟಿ20 ವಿಶ್ವಕಪ್ನ 4ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ವನಿತೆಯರು ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಪಾಕ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಭಾರತ ಬೌಲಿಂಗ್ ದಾಳಿಗೆ ಆರಂಭದಲ್ಲೇ ಪಾಕ್ ತಂಡಕ್ಕೆ ಶಾಕ್ ಉಂಟಾಗಿದ್ದು, 13 ಓವರ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.
ಆರಂಭಿಕ ಬ್ಯಾಟರ್ ಜವೇರಿಯಾ ಖಾನ್ಗೆ ಕಾಡಿದ ದೀಪ್ತಿ ಶರ್ಮಾ ಪಂದ್ಯದ ಎರಡನೇ ಓವರ್ನಲ್ಲಿ ವಿಕೆಟ್ ಪಡೆದರು. ತಂಡದ ಮೊತ್ತ 42 ಆಗಿದ್ದಾಗ ಮುನೀಬಾ ಅಲಿಯವರನ್ನು ರಾಧಾ ಯಾದವ್ ಔಟ್ ಮಾಡಿದರು. ನಿದಾ ದಾರ್ ಅವರು ಪೂಜಾ ವಸ್ತ್ರಾಕರ್ ಅವರಿಗೆ ಡಕ್ ಔಟ್ ಆದರು. 10 ಓವರ್ಗೆ ಪಾಕಿಸ್ತಾನ ತಂಡ 74ಕ್ಕೆ 4 ವಿಕೆಟ್ ನಷ್ಟ ಅನುಭವಿಸಿತ್ತು.
ಪಿಚ್ ವರದಿಯಂತೆ ಹೆಚ್ಚು ಬಿರುಕು ಇರುವುದರಿಂದ ಬೌಲರ್ ಸ್ನೇಹಿ ಆಗಿರಲಿದೆ. ಕಳೆದ ಪಂದ್ಯದಲ್ಲೂ ಪಿಚ್ ಸಾಧಾರಣ ಮೊತ್ತದ ಪಂದ್ಯಕ್ಕೆ ಕಾರಣವಾಗಿದ್ದ ಹಿನ್ನೆಲೆ ಇಂದು ಅದೇ ರೀತಿ ವರ್ತಿಸುವ ಸಾಧ್ಯತೆ ಇದೆ. ಎರಡೂ ಕಡೆಯ ಬೌಲರ್ಗಳಿಗೆ ಬೌಲಿಂಗ್ ಸ್ನೇಹಿ ಪಿಚ್ ಆಗಿರಲಿದೆ ಎಂದು ಅಂದಾಜಿಸಲಾಗಿದೆ.
ಟಾಸ್ ಗೆದ್ದ ಬಿಸ್ಮಾ ಮರೂಫ್ ಮಾತನಾಡಿ, ನಾವು ಮೊದಲು ಬ್ಯಾಟ್ ಮಾಡಲು ಬಯಸುತ್ತೇವೆ. ಇದು ಡ್ರೈ ವಿಕೆಟ್ ಆಗಿದೆ, ಹೆಚ್ಚು ಬದಲಾಗುವುದಿಲ್ಲ ಆದ್ದರಿಂದ ನಾವು ಹೆಚ್ಚು ಮೊತ್ತ ಕಲೆಹಾಕಿ ಬೃಹತ್ ಗುರಿ ನೀಡುವ ಉದ್ದೇಶ ಹೊಂದಿದ್ದೇವೆ. ಡಯಾನಾ ಬೇಗ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಕಳೆದ ಬಾರಿ ಭಾರತದ ವಿರುದ್ಧ ಗೆದ್ದಿದ್ದರಿಂದ ನಮಗೆ ಆತ್ಮವಿಶ್ವಾಸವಿದೆ ಎಂದರು.