ದುಬೈ: ಟಿ20 ವಿಶ್ವಕಪ್ಅನ್ನು ಮುಂದಿನ 8 ವರ್ಷಗಳ ಅವಧಿಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸುವುದಕ್ಕೆ ಮಂಗಳವಾರ ನಡೆದ ಸಭೆಯಲ್ಲಿ ಐಸಿಸಿ ನಿರ್ಧರಿಸಿದೆ. ಜೊತೆಗೆ ಏಕದಿನ ವಿಶ್ವಕಪ್ ತಂಡಗಳ ಸಂಖ್ಯೆಯನ್ನು 14ಕ್ಕೆ ಮತ್ತು ಟಿ20 ವಿಶ್ವಕಪ್ಗೆ 20ಕ್ಕೆ ವಿಸ್ತರಿಸಿದೆ.
ಇದಲ್ಲದೆ 2031ರ ವರೆಗೆ 4 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು 2 ಚಾಂಪಿಯನ್ಸ್ ಟ್ರೋಫಿ ಕೂಡ ಆಯೋಜನೆಯಾಗಲಿದೆ. 2027 ಮತ್ತು 2031ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಒಟ್ಟು 2024ರಿಂದ 2031ರವರೆಗೆ 4 ಟಿ20, 4 WTC, ತಲಾ 2 ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಮುಹೂರ್ತ ಇಡಲಾಗಿದೆ.
ಪ್ರಸ್ತುತ ಏಕದಿನ ವಿಶ್ವಕಪ್ 10 ತಂಡಗಳ ಸ್ಪರ್ಧೆ ಮತ್ತು ಟಿ20 16 ತಂಡಗಳ ಟೂರ್ನಿಯಾಗಿದೆ. ವಿಶ್ವದಾದ್ಯಂತ ಕ್ರಿಕೆಟ್ ವಿಸ್ತರಿಸುವ ಉದ್ದೇಶದಿಂದ ಐಸಿಸಿ ತಂಡಗಳ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಏಕದಿನ ವಿಶ್ವಕಪ್ 54 ಪಂದ್ಯಗಳ ಟೂರ್ನಿಯಾದರೆ, ಟಿ20 ವಿಶ್ವಕಪ್ 55 ಪಂದ್ಯಗಳ ಟೂರ್ನಿಯಾಗಲಿದೆ ಎಂದು ಐಸಿಸಿ ತಿಳಿಸಿದೆ.