ದುಬೈ: ಭಾರತದ ವಿರುದ್ಧದ ಸರಣಿಯಲ್ಲಿ ಸತತ 3 ಶತಕ ಸಿಡಿಸಿ ವಿಜೃಂಭಿಸುತ್ತಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ರೂಟ್ ಟೆಸ್ಟ್ ಶ್ರೇಯಾಂಕದಲ್ಲಿ ಆರು ವರ್ಷಗಳ ನಂತರ ಮೊದಲ ಸ್ಥಾನ ಪಡೆದಿದ್ದಾರೆ.
30 ವರ್ಷದ ಆಂಗ್ಲ ಬ್ಯಾಟ್ಸ್ಮನ್ ಭಾರತದ ವಿರುದ್ಧ ಸರಣಿ ಆರಂಭವಾದಾಗ 5ನೇ ಸ್ಥಾನದಲ್ಲಿದ್ದರು. ಆದರೆ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ 507 ರನ್ ಸಿಡಿಸಿರುವುದು ಅವರನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದಿದೆ. ಅವರು ಮೂರು ಟೆಸ್ಟ್ಗಳ ಅವಧಿಯಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್ ಮತ್ತು ವಿಲಿಯಮ್ಸನ್ರನ್ನು ಹಿಂದಿಕ್ಕಿದ್ದಾರೆ.
ರೂಟ್ ಡಿಸೆಂಬರ್ 2015ರಲ್ಲಿ ಕೊನೆಯ ಬಾರಿ ಅಗ್ರಸ್ಥಾನಕ್ಕೇರಿದ್ದರು. ನಂತರ ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಇಲ್ಲಿಯವರೆಗೆ ಅಗ್ರಸ್ಥಾನವನ್ನು ವಿವಿಧ ಸಮಯದಲ್ಲಿ ಅಲಂಕರಿಸಿದ್ದರು. ಇವರ ಮಧ್ಯೆ ದಕ್ಷಿಣ ಅಫ್ರಿಕಾದ ಎಬಿ ಡಿ ವಿಲಿಯರ್ಸ್ ಕೂಡ 2015ರಲ್ಲಿ ಒಮ್ಮೆ ಅಗ್ರಸ್ಥಾನದಲ್ಲಿದ್ದರು.
ಇಂಗ್ಲೀಷ್ ಕ್ಯಾಪ್ಟನ್ 917 ರೇಟಿಂಗ್ ಪಡೆದಿದ್ದಾರೆ. ಅವರು ವೃತ್ತಿ ಜೀವನ ಗರಿಷ್ಠ ರೇಟಿಂಗ್ ಅಂಕಕ್ಕೆ ಒಂದು ಅಂಕ ಮಾತ್ರ ಹಿಂದಿದ್ದಾರೆ. 2017ರಲ್ಲಿ ಅವರು 918 ರೇಟಿಂಗ್ ಪಡೆದಿದ್ದರು. ಮುಂಬರುವ ಎರಡು ಟೆಸ್ಟ್ಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರೆ ತಮ್ಮ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುವ ಅವಕಾಶವಿದೆ.