ದುಬೈ: ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ನಸ್ ಲಾಬುಶೇನ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಹಿಂದಿಕ್ಕಿರುವ ಲಾಬುಶೇನ್, 912 ರೇಟಿಂಗ್ ಅಂಕಗಳೊಂದಿಗೆ ಜೀವನಶ್ರೇಷ್ಠ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಹಿನ್ನೆಲೆಯಲ್ಲಿ ಮಾರ್ನಸ್ ಜೀವನಶ್ರೇಷ್ಠ ರ‍್ಯಾಂಕಿಂಗ್ ತಲುಪಿದ್ದಾರೆ. ಇದೇ ವೇಳೆ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆ್ಯಶಸ್ ಸರಣಿಗೂ ಮುನ್ನ ರ್ಯಾಂಕಿಂಗ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಲಾಬುಶೇನ್, ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 74 ರನ್ ಬಾರಿಸಿದ ಬಳಿಕ ಎರಡನೇ ಸ್ಥಾನಕ್ಕೇರಿದ್ದರು. ನಂತರ ಅಡಿಲೇಡ್‌ನಲ್ಲಿ ನಡೆದ ಅಹರ್ನಿಸಿ ಟೆಸ್ಟ್ ಪಂದ್ಯದಲ್ಲಿ ಶತಕ(103) ಹಾಗೂ ಅರ್ಧಶತಕ (51) ಬಾರಿಸಿರುವುದು ಈ ಸಾಧನೆಗೆ ಕಾರಣವಾಗಿದೆ.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 275 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ.
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್:
- ಮಾರ್ನಸ್ ಲಾಬುಶೇನ್ (912)
- ಜೋ ರೂಟ್ (897)
- ಸ್ಟೀವ್ ಸ್ಮಿತ್ (884)
- ಕೇನ್ ವಿಲಿಯಮ್ಸನ್ (879)
- ರೋಹಿತ್ ಶರ್ಮಾ (797)
- ಡೇವಿಡ್ ವಾರ್ನರ್ (775)
- ವಿರಾಟ್ ಕೊಹ್ಲಿ (756)
- ದಿಮುತ್ ಕರುಣರತ್ನೆ (754)
- ಬಾಬರ್ ಆಜಂ (750)
- ಟ್ರಾವಿಸ್ ಹೆಡ್ (728)
ಟಿ-20 ರ್ಯಾಂಕಿಂಗ್ನಲ್ಲಿ ಮತ್ತೆ ಬಾಬರ್ ಪಾರಮ್ಯ:
ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 0 ಮತ್ತು 7 ರನ್ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ರ್ಯಾಂಕಿಂಗ್ನಲ್ಲಿ ಕುಸಿತ ಕಂಡಿದ್ದರು. ಆದರೆ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 53 ಎಸೆತಗಳಲ್ಲಿ 79 ರನ್ ಗಳಿಸಿದರಲ್ಲದೆ, 3-0 ಅಂತರದಲ್ಲಿ ಪಾಕಿಸ್ತಾನ ಸರಣಿ ಕ್ಲೀನ್ ಸ್ವೀಪ್ ಮಾಡಲು ಸಹಾಯ ಮಾಡಿತ್ತು. ತಲಾ 805 ಅಂಕಗಳೊಂದಿಗೆ ಇಂಗ್ಲೆಂಡ್ನ ಡೇವಿಡ್ ಮಲಾನ್ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪಾಕ್ನ ಮತ್ತೋರ್ವ ಆರಂಭಿಕ ಆಟಗಾರ ಮೊಹಮದ್ ರಿಜ್ವಾನ್ 798 ಅಂಕಗಳ ಮೂಲಕ ಮೂರನೇ ರ್ಯಾಂಕ್ನಲ್ಲಿದ್ದಾರೆ. ದ.ಆಫ್ರಿಕಾದ ಏಡೆನ್ ಮಾರ್ಕ್ರಮ್4 ನೇ ಸ್ಥಾನಕ್ಕೆ ಜಾರಿದರೆ, ಭಾರತದ ಕೆ.ಎಲ್. ರಾಹುಲ್ ಐದನೇ ಸ್ಥಾನ ಉಳಿಸಿಕೊಂಡರೆ, ವಿರಾಟ್ ಕೊಹ್ಲಿ 11ನೇ ರ್ಯಾಂಕ್ನಲ್ಲಿದ್ದಾರೆ.
ಅಗ್ರ 10ರೊಳಗೆ ವೇಗಿ ಸ್ಟಾರ್ಕ್:
ಆ್ಯಶಸ್ ಸರಣಿ ಮೊದಲೆರಡು ಟೆಸ್ಟ್ಗಳಲ್ಲಿ 10 ವಿಕೆಟ್ ಕಬಳಿಸಿರುವ ಆಸೀಸ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಆರ್ ಅಶ್ವಿನ್, ಶಾಹೀನ್ ಶಾ ಆಫ್ರಿದಿ, ಟಿಮ್ ಸೌಥಿ ಮತ್ತು ಜೋಶ್ ಹ್ಯಾಜಲ್‌ವುಡ್ ನಂತರದ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ರ‍್ಯಾಂಕಿಂಗ್ ಪಟ್ಟಿ:
ಆ್ಯಶಸ್ ಸರಣಿಯಲ್ಲಿ ಉತ್ತಮ ಪ್ರದರ್ಶನ ಹಿನ್ನೆಲೆಯಲ್ಲಿ ಸ್ಟಾರ್ಕ್ ಮತ್ತು ಇಂಗ್ಲೆಂಡ್ ನಾಯಕ ರೂಟ್ ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಅಡಿಲೇಡ್ ಟೆಸ್ಟ್‌ನಲ್ಲಿ ಸ್ಟಾರ್ಕ್ 39* ಮತ್ತು 19 ರನ್ ಗಳಿಸಿದ್ದಲ್ಲದೆ ಮತ್ತು ಆರು ವಿಕೆಟ್ ಪಡೆದಿದ್ದು, ಆ ರ‍್ಯಾಂಕಿಂಗ್ ಪಟ್ಟಿಯಲ್ಲಿ 7ರಿಂದ 6ನೇ ಸ್ಥಾನಕ್ಕೆ ಏರಿದ್ದಾರೆ. ವಿಂಡೀಸ್್ನ ಜೇಸನ್ ಹೋಲ್ಡರ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್ ಮತ್ತು ಬೆನ್ ಸ್ಟೋಕ್ಸ್ ಅವರು ಸ್ಟಾರ್ಕ್ಗಿಂತ ಮೇಲಿದ್ದಾರೆ. ಅಡಿಲೇಡ್‌ನಲ್ಲಿ ಮೂರು ವಿಕೆಟ್ ಹಾಗೂ 86 ರನ್ ಗಳಿಸಿದ್ದ ರೂಟ್ ಎರಡು ಸ್ಥಾನಗಳ ಏರಿಕೆ ಕಂಡು 10ಕ್ಕೆ ಲಗ್ಗೆ ಇಟ್ಟಿದ್ದಾರೆ.