ದುಬೈ :ಭಾರತ-ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ರಿಲೀಸ್ ಆಗಿದೆ. ಟೀಂ ಇಂಡಿಯಾದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅಗರವಾಲ್ 30 ಸ್ಥಾನ ಮೇಲೆಕ್ಕೇರಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಮಯಾಂಕ್ ಅಗರವಾಲ್ ಕ್ರಮವಾಗಿ 150 ಹಾಗೂ 62ರನ್ಗಳಿಕೆ ಮಾಡಿದ್ದರು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇದರ ಬೆನ್ನಲ್ಲೇ ಇದೀಗ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅತ್ಯುತ್ತಮ ಜಿಗಿತ ಕಂಡಿದ್ದಾರೆ. 30 ಸ್ಥಾನ ಮೇಲೇರಿರುವ ಈ ಪ್ಲೇಯರ್ ಇದೀಗ 11ನೇ ರ್ಯಾಂಕ್ ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ರನ್ಗಳಿಕೆ ಮಾಡಿದ್ರೆ ಟಾಪ್ 10ರೊಳಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.
ಇದನ್ನೂ ಓದಿರಿ:ಕ್ಯಾಪ್ಟನ್ ಆಗಿ ಆಡಿದ ಮೊದಲ ಪಂದ್ಯದಲ್ಲಿ ಕಮಿನ್ಸ್ ರೆಕಾರ್ಡ್.. 1982ರ ಬಳಿಕ ಮೂಡಿಬಂತು ಈ ಸಾಧನೆ!
ಈ ಹಿಂದೆ 2019ರಲ್ಲಿ ಮಯಾಂಕ್ ಅಗರವಾಲ್ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದಾದ ಬಳಿಕ ಅವರು ಟಾಪ್ 10ರಲ್ಲಿ ಕಾಣಿಸಿಕೊಂಡಿಲ್ಲ. ಉಳಿದಂತೆ ಇಂಗ್ಲೆಂಡ್ನ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ 5 ಹಾಗೂ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಶುಬ್ಮನ್ ಗಿಲ್ ಕೂಡ 22 ಸ್ಥಾನ ಜಿಗಿತ ಕಂಡು 46ನೇ ಸ್ಥಾನದಲ್ಲಿದ್ದಾರೆ. ಆದರೆ, ಅಜಿಂಕ್ಯ ರಹಾನೆ 2 ಸ್ಥಾನ ಕುಸಿದು 28ನೇ ಸ್ಥಾನಕ್ಕೆ ಹಾಗೂ ಚೇತೇಶ್ವರ ಪೂಜಾರ 1 ಸ್ಥಾನ ಕುಸಿದು 17ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾದ ಸ್ಪಿನ್ನರ್ ಆರ್.ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.