ನವದೆಹಲಿ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಟೆಸ್ಟ್ಗೆ ಬಾಸ್ ಆಗಿ ಹೊರಹೊಮ್ಮಿದ ಆಸ್ಟ್ರೇಲಿಯಾ, ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲೂ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ಒಂದೇ ದೇಶದ ಆಟಗಾರರು ಮೊದಲ ಮೂರು ಸ್ಥಾನ ಪಡೆದಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ 39 ವರ್ಷಗಳ ಬಳಿಕದ ಅಪರೂಪದ ದಾಖಲೆಯಾಗಿದೆ. ಇದೇ ವೇಳೆ 2 ವರ್ಷಗಳ ಬಳಿಕ ಟೆಸ್ಟ್ಗೆ ಮರಳಿ ಡಬ್ಲ್ಯೂಟಿಸಿಯಲ್ಲಿ ಭಾರತದ ಆಪತ್ಬಾಂಧವನಾಗಿದ್ದ ಅಜಿಂಕ್ಯ ರಹಾನೆ ರ‍್ಯಾಂಕಿಂಗ್ ಪಟ್ಟಿಯೊಳಗೆ ಪ್ರವೇಶ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಸೀಸ್ ಬ್ಯಾಟರ್ಗಳು ವಿಶೇಷ ದಾಖಲೆ ಬರೆದಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಮಾರ್ನಸ್ ಲಬುಶೇನ್ ಅಗ್ರಸ್ಥಾನ ಪಡೆದರೆ, ಸ್ಟೀವ್ ಸ್ಮಿತ್ 2ನೇ, ಟ್ರೇವಿಸ್ ಹೆಡ್ 3ನೇ ಕ್ರಮಾಂಕವನ್ನು ಪಡೆದುಕೊಂಡಿದ್ದಾರೆ. ಲಬುಶೇನ್ 903 ರೇಟಿಂಗ್ ಅಂಕ ಹೊಂದಿದ್ದರೆ, ಸ್ಮಿತ್ 885, ಹೆಡ್ 884 ಅಂಕ ಪಡೆದಿದ್ದಾರೆ.
ಇದಕ್ಕೂ ಮೊದಲು ಈ ಮೂವರೂ ಆಟಗಾರರು ಅಗ್ರ 10 ರೊಳಗೆ ಇದ್ದರು. ಟ್ರೇವಿಸ್ ಹೆಡ್ 6 ರಿಂದ 3 ನೇ ಸ್ಥಾನಕ್ಕೆ ಬಡ್ತಿ ಪಡೆದರೆ, 3 ರಲ್ಲಿದ್ದ ಸ್ಮಿತ್ 2 ಕ್ಕೆ ಜಿಗಿದಿದ್ದಾರೆ. ಅಗ್ರಸ್ಥಾನದಲ್ಲಿದ್ದ ಲಬುಶೇನ್ ಅಲ್ಲಿಯೇ ಮುಂದುವರಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಇನಿಂಗ್ಸ್ನಲ್ಲಿ ಶತಕ ಸಾಧನೆ ಮಾಡುವ ಮೂಲಕ ಸ್ಮಿತ್ ಮತ್ತು ಹೆಡ್ ಭಾರತವನ್ನು ಕಾಡಿದ್ದರು. ಎಡಗೈ ದಾಂಡಿಗ ಹೆಡ್ 163 ಮತ್ತು 18 ರನ್ ಮಾಡಿದರೆ, ಸ್ಮಿತ್ 121 ಮತ್ತು 34 ರನ್ ಗಳಿಸಿದ್ದರು. ಇದು ರೇಟಿಂಗ್ ಏರಿಕೆಗೆ ಕಾರಣವಾಗಿದೆ.