ದುಬೈ: 2021ರ 14ನೇ ಐಪಿಎಲ್ ಆವೃತ್ತಿಯು ಅಂತ್ಯವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್ ವಿಶ್ವಕಪ್ ಮನರಂಜನೆಗೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಐಸಿಸಿ ಟಿ-20 ವಿಶ್ವಕಪ್ ಯುಎಇಯಲ್ಲಿ ಆರಂಭವಾಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಭಾರತದಿಂದ ಸ್ಥಳಾಂತರಗೊಂಡಿರುವ ಟೂರ್ನಿಯು ಬಿಸಿಸಿಐ ಅತಿಥ್ಯದಲ್ಲಿ ಯುಎಇ ಮತ್ತು ಒಮಾನ್‌ನಲ್ಲಿ ಆಯೋಜನೆಗೊಂಡಿದೆ.
ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಒಮನ್ ತಂಡವು ಪಪುವಾ ನ್ಯೂಗಿನಿಯಾವನ್ನು ಎದುರಿಸಲಿದೆ. ಹಾಗೆಯೇ ಇಂದಿನ ಮತ್ತೊಂದು ಹಣಾಹಣಿಯಲ್ಲಿ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ.
ವಿಶ್ವಕಪ್‌ನಲ್ಲಿ ಈ ಬಾರಿ ಗರಿಷ್ಠ 16 ತಂಡಗಳು ಭಾಗವಹಿಸುತ್ತಿದ್ದು, ಎರಡು ಸುತ್ತುಗಳಲ್ಲಿ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳಿದ್ದು, 8 ತಂಡಗಳು ಎರಡು ಗುಂಪುಗಳಲ್ಲಿ ವಿಂಗಡಿಸಲ್ಪಟ್ಟಿದ್ದು, 12 ಪಂದ್ಯಗಳು ನಡೆಯಲಿವೆ. ಎ ಗ್ರೂಪ್ನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ ಹಾಗೂ ಬಿ ಗ್ರೂಪ್ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮನ್ ಎದುರಾಗಲಿವೆ.
ಅಲ್ ಅಮರತ್, ಶಾರ್ಜಾ, ದುಬೈ ಮತ್ತು ಅಬುಧಾಬಿಯಲ್ಲಿ ಈ ಪಂದ್ಯಗಳಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಮುಂದಿನ ಸುತ್ತು ಅಂದರೆ ಸೂಪರ್-12ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಸೂಪರ್-12ನಲ್ಲಿ ಕೂಡ 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗುಂಪು 1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ1, ಬಿ2 ಹಾಗೂ ಗುಂಪು 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, ಬಿ1, ಎ2 ಇರಲಿವೆ.
'ಸೂಪರ್ 12'ರ ಹಂತದ ಪಂದ್ಯಗಳು ಅಕ್ಟೋಬರ್ 24ರಂದು ಆರಂಭವಾಗಲಿದ್ದು, ಅಂದು ಗುಂಪು 2ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ವಿಶ್ವಕಪ್ನ ಮೊದಲ ಸೆಮಿಫೈನಲ್ ನ. 10ರಂದು, ಸಂಜೆ 07:30 ಗಂಟೆಗೆ ಅಬುಧಾಬಿ ಹಾಗೂ ಎರಡನೇ ಸೆಮಿಫೈನಲ್ ನವೆಂಬರ್ 11ರಂದು ಸಂಜೆ 7.30 ಗಂಟೆಗೆ ದುಬೈನಲ್ಲಿ ನಡೆಯಲಿವೆ. ನವೆಂಬರ್ 14ರಂದು ಸಂಜೆ 07:30 ಗಂಟೆಗೆ ಫೈನಲ್ ಹಣಾಹಣಿ ದುಬೈಯಲ್ಲಿದೆ.
ಸೂಪರ್ 12 ಹಂತದಲ್ಲಿ ಭಾರತ ತಂಡದ ಪಂದ್ಯಗಳು:
- ಅಕ್ಟೋಬರ್ 24: ಭಾರತ vs ಪಾಕಿಸ್ತಾನ (ರಾತ್ರಿ: 7:30ಕ್ಕೆ, ದುಬೈ)
- ಅಕ್ಟೋಬರ್ 31: ಭಾರತ vs ನ್ಯೂಜಿಲೆಂಡ್ (ರಾತ್ರಿ: 7:30ಕ್ಕೆ, ದುಬೈ)
- ನವೆಂಬರ್ 3: ಭಾರತ vs ಅಫ್ಘಾನಿಸ್ತಾನ (ರಾತ್ರಿ: 7:30ಕ್ಕೆ, ಅಬುಧಾಬಿ)
- ನವೆಂಬರ್ 5: ಭಾರತ vs ಬಿ1 ಅರ್ಹತಾ ತಂಡ (ರಾತ್ರಿ: 7:30ಕ್ಕೆ, ದುಬೈ)
- ನವೆಂಬರ್ 8: ಭಾರತ vs ಎ2 ಅರ್ಹತಾ ತಂಡ (ರಾತ್ರಿ 7:30ಕ್ಕೆ, ದುಬೈ)