ದಕ್ಷಿಣ ಗೀಲಾಂಗ್ (ಆಸ್ಟ್ರೇಲಿಯಾ): ಗೀಲಾಂಗ್‌ನಲ್ಲಿ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ 2022ರ ಗ್ರೂಪ್ ಎ ಮೊದಲ ಸುತ್ತಿನ ಪಂದ್ಯದಲ್ಲಿ 2022ರ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾಗೆ ನಮೀಬಿಯಾ ತಂಡ ಆಘಾತ ನೀಡಿದೆ. ಸಿಂಹಳೀಯರ ವಿರುದ್ಧ ನಮೀಬಿಯಾ 55 ರನ್‌ಗಳ ಅಂತರದ ಅವಿಸ್ಮರಣೀಯ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ನಮೀಬಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ ಲಂಕನ್ನರು ಇನ್ನಿಂಗ್ಸ್ನ ಮೊದಲಾರ್ಧದಲ್ಲಿ ಅದ್ಭುತ ಯಶಸ್ಸು ಕಂಡರು. ಶ್ರೀಲಂಕಾದ ಕರಾರುವಾಕ್ ಬೌಲಿಂಗ್ ದಾಳಿಗೆ ಸಿಲುಕಿದ ನಮೀಬಿಯಾ 93ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಮೈಕೆಲ್ ವ್ಯಾನ್ ಲಿಂಗನ್ 3, ದಿವಾನ್ ಲಾ ಕಾಕ್ 9, ಲಾಫ್ಟಿ-ಈಟನ್ 20, ಬಾರ್ಡ್ 26, ಎರಾಸ್ಮಸ್ 20 ರನ್ ಹಾಗೂ ವೈಸ್ ಶೂನ್ಯಕ್ಕೆ ಔಟಾಗಿದ್ದರು.
ಆದರೆ ಈ ನಂತತ ಒಂದಾದ ಜಾನ್ ಫ್ರಿಲಿಂಕ್(44, 28 ಎಸೆತ) ಹಾಗೂ ಜೆಜೆ ಸ್ಮಿತ್ (31, 16 ಎಸೆತ) ಅಬ್ಬರದ ಬ್ಯಾಟಿಂಗ್ ಮೂಲಕ ಲಂಕನ್ನರಿಗೆ ಬೆವರಿಳಿಸಿದರು. ಈ ಜೋಡಿ 7ನೇ ವಿಕೆಟ್ಗೆ 5.4 ಓವರ್‌ಗಳಲ್ಲಿ 70 ರನ್ ದೋಚಿತಲ್ಲದೆ, ತಂಡದ ಮೊತ್ತವನ್ನು 163 ರನ್ಗೆ ಕೊಂಡೊಯ್ದರು.