ಹೈದರಾಬಾದ್ :ಟಿ20 ಫೇವರೇಟ್ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ವಿಶ್ವಕಪ್ ಗೆಲ್ಲುತ್ತಾರಾ ಎಂಬುದು ಮಿಲಿಯಂನ್ ಡಾಲರ್ ಪ್ರಶ್ನೆಯಲ್ಲಿ ಒಂದು. ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡ ನ್ಯೂನತೆ ಮೆಟ್ಟಿನಿಂತು ಎರಡನೇ ಬಾರಿ ಕಪ್ ಗೆಲ್ಲುವ ಹಂಬಲದಲ್ಲಿದೆ. ಐಪಿಎಲ್ನ ಯಶಸ್ವಿ ನಾಯಕ ರೋಹಿತ್ ಇತ್ತೀಚೆಗೆ ಏಷ್ಯಾಕಪ್ ಗೆಲ್ಲುವಲ್ಲಿ ವೈಫಲ್ಯ ಕಂಡರೂ ವಿಶ್ವಕಪ್ ಮೇಲೆ ಭರವಸೆ ಹೆಚ್ಚಿದೆ.
ಟಿ20 ವಿಶ್ವಕಪ್ ಆರಂಭವಾದ ವರ್ಷದಲ್ಲಿ ಧೋನಿ ನಾಯಕತ್ವದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ನಂತರ 2014ರಲ್ಲಿ ಶ್ರೀಲಂಕಾ ಎದುರು ಸೋಲುಂಡು ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು. 2016ರ ನಂತರ ಕೋವಿಡ್ ಕಾರಣ 2019ರಲ್ಲಿ ನಡೆಯಬೇಕಿದ ವಿಶ್ವಕಪ್ 2021ರಲ್ಲಿ ತಟಸ್ಥ ಸ್ಥಳ ಯುಎಇಯಲ್ಲಿ ನಡೆಯಿತು.
ಭಾರತ ತಂಡಕ್ಕೆ ಗಾಯದ ಸಮಸ್ಯೆ:ಇತ್ತೀಚೆಗೆ ಆಸ್ಟ್ರೇಲಿಯಾದ ಎದುರು ಪಂದ್ಯ ಆಡುವ ಮುನ್ನ ರವೀಂದ್ರ ಜಡೇಜ ಮೊಣಕಾಲು ಗಾಯಕ್ಕೆ ಒಳಗಾದರು. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಅವರು ಗಾಯದ ಸಮಸ್ಯೆಯಿಂದ ವಿಶ್ವಕಪ್ನಿಂದ ಹೊರಗುಳಿದರು. ನಂತರ ಇಂಡಿಯನ್ ಟೀಂನ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಬೆನ್ನು ನೋವಿನಿಂದ ತಂಡದಿಂದ ಹೊರಗುಳಿಯಬೇಕಾಯಿತು. ದಕ್ಷಿಣ ಆಫ್ರಿಕಾ ಸರಣಿಯಿಂದ ದಿಪಕ್ ಚಹರ್ ಗಾಯದ ಸಮಸ್ಯೆ ಎದುರಿಸಿ ಹೊರಗುಳಿದರು.
ಮೂವರೂ ಆಟಗಾರರು ಭಾರತ ವಿಶ್ವಕಪ್ ತಂಡದ ಭರವಸೆಯ ಆಟಗಾರರಾಗಿದ್ದರು. ಆಲ್ರೌಂಡರ್ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯಗೆ ಬಲವಾಗಿ ಜಡೇಜ ಅವರಿಗೆ ಸ್ಥಾನ ಲಭಿಸುವ ಸಾಧ್ಯತೆ ಇತ್ತು. ಬುಮ್ರಾ ತಂಡಕ್ಕೆ ಆಯ್ಕೆ ಆದ ನಂತರ ಗಾಯಕ್ಕೆ ಒಳಗಾದರು. ಅವರ ಸ್ಥಾನವನ್ನು ಮೀಸಲು ಆಟಗಾರ ದೀಪಕ್ ಚಹರ್ ತುಂಬಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆಸ್ಟ್ರೇಲಿಯಾದ ಎದುರಿನ ಎರಡನೇ ಟಿ20 ನಂತರ ಗಾಯದ ಸಮಸ್ಯೆ ಚಹರ್ಗೂ ಕಾಡಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
ಒಂದು ತಿಂಗಳ ಕಾಲ ನಡೆಯುವ ಐಸಿಸಿ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ಆರಂಭವಾಗಿದೆ. ನವೆಂಬರ್ 13ರಂದು ಫೈನಲ್ ಪಂದ್ಯಗಳು ನಡೆಯಲಿವೆ.
ತಂಡಗಳು, ಗುಂಪುಗಳು, ಸ್ವರೂಪ:ಪ್ರಸಕ್ತ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಅಗ್ರ ಎಂಟು ತಂಡಗಳು ಈಗಾಗಲೇ ಅರ್ಹತೆ ಪಡೆದಿದ್ದು, ಉಳಿದ ನಾಲ್ಕು ತಂಡಗಳು ಅರ್ಹತಾ ಸುತ್ತಿನ ಮೂಲಕ ಅವಕಾಶ ಪಡೆದುಕೊಳ್ಳಲಿವೆ. ಎ ಮತ್ತು ಬಿ ಗುಂಪಿನ ಎಂಟು ತಂಡಗಳಲ್ಲಿ ವಿನ್ನರ್ ಮತ್ತು ರನ್ನರ್ ಅಪ್ ಆದವರಿಗೆ ಗುಂಪಿಗೆ ಏರುವ ಅವಕಾಶ ಲಭಿಸುತ್ತದೆ. ಅರ್ಹತಾ ಸುತ್ತಿನಲ್ಲಿ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ.
ICC ವಿಶ್ವ T20ನಲ್ಲಿ ಒಟ್ಟು ತಂಡಗಳ ಸಂಖ್ಯೆ: ಶ್ರೀಲಂಕಾ, ನಮೀಬಿಯಾ, ಯುಎಇ, ವೆಸ್ಟ್ ಇಂಡೀಸ್, ನೆದರ್ಲ್ಯಾಂಡ್ಸ್, ಐರ್ಲೆಂಡ್, ಜಿಂಬಾಬ್ವೆ, ಸ್ಕಾಟ್ಲೆಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ಥಾನ ಮತ್ತು ಆಸ್ಟ್ರೇಲಿಯಾ.