ದುಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 2022 ನೇ ಸಾಲಿನ ವರ್ಷದ ಟಿ20 ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಮಹಿಳಾ ಟಿ20 ತಂಡವನ್ನೂ ಬಿಡುಗಡೆ ಮಾಡಲಾಗಿದ್ದು, ನಾಲ್ವರು ಆಟಗಾರ್ತಿಯರು ಪಾಲು ಪಡೆದಿದ್ದಾರೆ. ಕಳೆದ ವರ್ಷ ಅತ್ಯಾಕರ್ಷಕ ಆಟ ಪ್ರದರ್ಶಿಸಿದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ಚುಟುಕು ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪುರುಷರ ಟಿ20 ತಂಡದ ಭಾಗವಾಗಿದ್ದಾರೆ.
11 ಸದಸ್ಯರ ಪುರುಷರ ತಂಡಕ್ಕೆ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ರನ್ನರ್ ಅಪ್ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಆರಂಭಿಕರಾಗಿ ಸ್ಥಾನ ಗಳಿಸಿದರೆ, ವೇಗಿ ಹ್ಯಾರಿಸ್ ರೌಫ್ ತಂಡದಲ್ಲಿರುವ ಮತ್ತೊಬ್ಬ ಪಾಕಿಸ್ತಾನಿ ಆಟಗಾರ. ಇದಲ್ಲದೇ, ನ್ಯೂಜಿಲ್ಯಾಂಡ್ನ ಗ್ಲೆನ್ ಫಿಲಿಪ್ಸ್, ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ, ಇಂಗ್ಲೆಂಡ್ನ ಸ್ಯಾಮ್ ಕರ್ರನ್, ಶ್ರೀಲಂಕಾದ ವನಿಂದು ಹಸರಂಗ, ಐರ್ಲೆಂಡ್ನ ಜೋಶ್ ಲಿಟಲ್ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿದೆ.
ಭಾರತೀಯರ ಸಾಧನೆ:ಬ್ಯಾಟಿಂಗ್ ಲಯ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಕಳೆದ ವರ್ಷ ಅದ್ಭುತ ಫಾರ್ಮ್ ಕಂಡುಕೊಂಡಿದ್ದರು. ಏಷ್ಯಾ ಕಪ್ನಲ್ಲಿ ಉತ್ತಮ ಬ್ಯಾಟ್ ಮಾಡಿದ ವಿರಾಟ್, ಐದು ಪಂದ್ಯಗಳಲ್ಲಿ 276 ರನ್ ಗಳಿಸುವ ಮೂಲಕ ಎರಡನೇ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದರು. ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಶತಕದೊಂದಿಗೆ ಮೂರು ವರ್ಷಗಳ ಶತಕದ ಬರ ನೀಗಿಸಿಕೊಂಡರು.
ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಅದೇ ಬ್ಯಾಟಿಂಗ್ ಲಯ ಮುಂದುವರಿಸಿದ ಕೊಹ್ಲಿ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದರು. 296 ರನ್ಗಳಿಸಿದ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್ನರ್ ಕೂಡ ಆಗಿದ್ದರು.
ಟಿ20 ಯಲ್ಲಿ ಬೆಳಗಿದ ಸೂರ್ಯ:ಸೂರ್ಯಕುಮಾರ್ ಯಾದವ್ ಚುಟುಕು ಕ್ರಿಕೆಟ್ನ ಅಧಿಪತಿಯಾಗಿದ್ದಾರೆ. ವರ್ಷದಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಶ್ರೇಯಕ್ಕೂ ಪಾತ್ರರಾದರು. 2 ಶತಕಗಳು ಮತ್ತು 9 ಅರ್ಧ ಶತಕಗಳೊಂದಿಗೆ 187.43 ರನ್ರೇಟ್ ಮೂಲಕ ವರ್ಷದಲ್ಲಿ 1164 ರನ್ ಗಳಿಸಿದ ಅಗ್ರ ಆಟಗಾರನಾಗಿದ್ದಾನೆ. ವಿಶ್ವಕಪ್‌ನಲ್ಲಿ 189.68 ಸ್ಟ್ರೈಕ್ ರೇಟ್‌ನಲ್ಲಿ 239 ರನ್ ಗಳಿಸಿದ ಸೂರ್ಯಕುಮಾರ್ ಸದ್ಯ, ಟಿ20 ಕ್ರಿಕೆಟ್ನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಆಗಿದ್ದಾರೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಅದ್ಭುತ ಆಟವಾಡಿದ್ದಾರೆ. 607 ರನ್ ಗಳಿಸಿರುವ ಪಾಂಡ್ಯ 20 ವಿಕೆಟ್‌ಗಳನ್ನು ಪಡೆದಿದ್ದಾರೆ.