ಕರ್ನಾಟಕ

karnataka

ETV Bharat / sports

ICC World Cup: ಅಮೆರಿಕದ ಬೌಲರ್ ಕೈಲ್ ಫಿಲಿಪ್ ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತು

ಜೂನ್ 18 ರಂದು ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಅಮೆರಿಕದ ಬೌಲರ್ ಕೈಲ್ ಫಿಲಿಪ್ ಮಾಡಿದ ಬೌಲಿಂಗ್​ ಕ್ರಮ ಸರಿ ಇಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.

Kyle Phillip
ಕೈಲ್ ಫಿಲಿಪ್

By

Published : Jun 23, 2023, 12:30 PM IST

ದುಬೈ: ನಡೆಯುತ್ತಿರುವ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಗಳ ವೇಳೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಕ್ರಿಕೆಟ್ ತಂಡಕ್ಕೆ ಭಾರಿ ಹಿನ್ನಡೆ ಆಗಿದೆ. ತಂಡದ ವೇಗದ ಬೌಲರ್ ಕೈಲ್ ಫಿಲಿಪ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್​ನಿಂದ ಅಮಾನತುಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬೌಲರ್ ಕೈಲ್ ಫಿಲಿಪ್ ಬೌಲಿಂಗ್ ವಿಧಾನ ಸರಿ ಇಲ್ಲ ಎಂದು ಹೇಳಿದೆ.

ಈ ವರ್ಷ ಅಕ್ಟೋಬರ್​ ಮತ್ತು ನವೆಂಬರ್​ ತಿಂಗಳಿನಲ್ಲಿ ಭಾರತದಲ್ಲಿ 2023ರ ಏಕದಿನ ಪುರುಷರ ವಿಶ್ವಕಪ್​ ನಡೆಯಲಿದೆ. ಇದಕ್ಕೆ ಈಗಾಗಲೇ ಐಸಿಸಿ ಶ್ರೇಯಾಂಕದಲ್ಲಿ ಎಂಟು ಸ್ಥಾನಗಳಲ್ಲಿರುವ ತಂಡಗಳು ಆಡುವುದು ನಿಗದಿಯಾಗಿದೆ. ಇನ್ನು ಎರಡೂ ತಂಡಗಳು ಈ ವಿಶ್ವಕಪ್​ಗಾಗಿ ಸ್ಪರ್ಧಿಸಲು ಅರ್ಹತಾ ಸುತ್ತಿನ ಪಂದ್ಯವನ್ನು ಆಡಬೇಕಿದೆ. ಇದಕ್ಕಾಗಿ ಅರ್ಹತಾ ಪಂದ್ಯಗಳು ಜಿಂಬಾಬ್ವೆಯಲ್ಲಿ ನಡೆಸಲಾಗುತ್ತಿದೆ.

ಈ ಅರ್ಹತಾ ಸುತ್ತಿನಲ್ಲೂ ಹತ್ತು ತಂಡಗಳು ಭಾಗವಹಿಸುತ್ತಿದ್ದು, ಗೆದ್ದ ಮತ್ತು ರನ್ನರ್​ ಅಪ್​ ತಂಡ ವಿಶ್ವಕಪ್​ ಸ್ಪರ್ಧೆಯಲ್ಲಿ ಆಡಲಿದೆ. ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ, ವೆಸ್ಟ್​ ಇಂಡೀಸ್​, ಜಿಂಬಾಬ್ವೆ, ನೇಪಾಳ, ಯುಎಇ, ಯುಎಸ್​ಎ, ನೆದರ್​ಲ್ಯಾಂಡ್, ಐರ್ಲೆಂಡ್,​ ಸ್ಕಾಟ್​ಲ್ಯಾಂಡ್​ ಮತ್ತು ಒಮನ್​ ತಂಡಗಳು ಸ್ಪರ್ಧಿಸುತ್ತಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೊರಡಿಸಿದ ಹೇಳಿಕೆ ಪ್ರಕಾರ, ಜೂನ್ 18 ರ ಭಾನುವಾರದಂದು ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್ ಕೈಲ್ ಫಿಲಿಪ್ 'ಅಕ್ರಮ' ಬೌಲಿಂಗ್ ಕ್ರಮವನ್ನು ಬಳಸುತ್ತಿರುವುದು ಕಂಡು ಬಂದಿದೆ. ಇದಕ್ಕಾಗಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದಂತೆ ಅಮಾನತುಗೊಳಿಸಲಾಗಿದೆ.

ಕೆರಿಬಿಯನ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಫಿಲಿಪ್ ಅದ್ಭುತ ಪ್ರದರ್ಶನ ನೀಡಿ 56 ರನ್ ನೀಡಿ 3 ವಿಕೆಟ್ ಪಡೆದರು. ಆದರೆ, ಅಮೆರಿಕ ತಂಡ 39 ರನ್​ನಿಂದ ಪಂದ್ಯದಲ್ಲಿ ಸೋಲು ಕಂಡಿತು. ಪಂದ್ಯದ ನಂತರ ಸಂಬಂಧಿಸಿದ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಐಸಿಸಿ ಈವೆಂಟ್ ಪ್ಯಾನೆಲ್ ಬೌಲಿಂಗ್ ನಿಯಮದ ಪ್ರಕಾರ ವೇಗದ ಬೌಲರ್ ಬೌಲಿಂಗ್ ವಿಧಾನ ತಪ್ಪು ಎಂದು ಕಂಡುಬಂದಿದೆ.

ಈವೆಂಟ್ ಪ್ಯಾನೆಲ್ ಫಿಲಿಪ್ ಅವರ ಬೌಲಿಂಗ್ ಕ್ರಮದ ವಿಡಿಯೋ ತುಣುಕನ್ನು ಪರಿಶೀಲಿಸಿ ಮತ್ತು ಅವರು ಅಕ್ರಮ ಬೌಲಿಂಗ್ ಕ್ರಮವನ್ನು ಬಳಸುತ್ತಿದ್ದಾರೆ ಎಂದು ತೀರ್ಮಾನಿಸಿದರು. ಆಟದ ನಿಯಮಗಳ ಪ್ರಕಾರ ಐಸಿಸಿಯ 6.7 ನಿಯಮದ ಅಡಿ ಅವರನ್ನು ಅಮಾನತು ಮಾಡಿದೆ. ಅದಕ್ಕಾಗಿಯೇ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದಂತೆ ತಿಳಿಸಲಾಗಿದೆ.

"ಫಿಲಿಪ್ ಅವರನ್ನು ತಕ್ಷಣವೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದರಿಂದ ಅಮಾನತುಗೊಳಿಸಲಾಗಿದೆ. ಅವರ ಬೌಲಿಂಗ್ ಕ್ರಿಯೆಯ ಮರು-ಪರೀಕ್ಷೆಗೆ ಒಳಪಡಿಸಿ ಕಾನೂನಾತ್ಮಕವಾಗಿ ಸರಿ ಇದೆ ಎಂದು ಒಪ್ಪಿಗೆ ಪಡೆದ ನಂತರವಷ್ಟೇ ಅವರು ಮತ್ತೆ ಬೌಲಿಂಗ್​ ಮಾಡಬಹುದು" ಎಂದು ಐಸಿಸಿ ತಿಳಿಸಿದೆ.

ಅರ್ಹತಾ ಸುತ್ತಿನ ಪಂದ್ಯಗಳಿಗೆ ಐದು ತಂಡಗಳ ಎರಡು ಗುಂಪನ್ನು ಐಸಿಸಿ ಮಾಡಿದೆ. ಎ ಗುಂಪಿನಲ್ಲಿರುವ ಯುನೈಟೆಡ್​ ಸ್ಟೇಟ್ಸ್​ ತಂಡ ವೆಸ್ಟ್​ ಇಂಡೀಸ್​, ನೇಪಾಳ ಮತ್ತು ನೆದರ್​ಲ್ಯಾಂಡ್ ವಿರುದ್ಧ ಸೋಲು ಕಂಡಿದೆ. 26ರಂದು ಜಿಂಬಾಬ್ವೆ ವಿರುದ್ಧ ಅಮೆರಿಕಾ ಆಡಲಿದ್ದು ಈ ಪಂದ್ಯದಲ್ಲಿ ಕೈಲ್ ಫಿಲಿಪ್ ಭಾಗವಹಿಸುವಂತಿಲ್ಲ.

ಇದನ್ನೂ ಓದಿ:ODI World Cup 2023 Schedule: ಮುಂದಿನ ವಾರವೇ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ?

ABOUT THE AUTHOR

...view details