ಹೈದರಾಬಾದ್:ಸದ್ಯ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರ ಬಿದ್ದಿರುವ ಶ್ರೀಲಂಕಾ ತಂಡಕ್ಕೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತೊಂದು ಶಾಕ್ ನೀಡಿದ್ದು, ತಕ್ಷಣವೇ ಜಾರಿಗೆ ಬರುವಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯತ್ವವನ್ನು ಅಮಾನತುಗೊಳಿಸಿದೆ.
ಹೌದು, ಶ್ರೀಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಕಂಡು ಬಂದಿದ್ದು ಐಸಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಉಲ್ಲೇಖಿಸಿರುವ ಐಸಿಸಿ ತಕ್ಷಣವೇ ಜಾರಿಗೆ ಬರುವಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯತ್ವವನ್ನು ರದ್ದುಗೊಳಿಸಿದೆ. ಶ್ರೀಲಂಕಾ ಕ್ರಿಕೆಟ್ ಮೇಲಿನ ನಿಷೇಧವನ್ನು ಐಸಿಸಿ ಹಿಂತೆಗೆದು ಕೊಳ್ಳುವವರೆಗೂ ತಂಡ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಾಧ್ಯವಿಲ್ಲ. ಪ್ರಸ್ತುತ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡದ ಎಲ್ಲ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಐಸಿಸಿ ಈ ಕ್ರಮ ಕೈಗೊಂಡಿದ್ದರಿಂದ ಟೂರ್ನಿ ವೇಳಾಪಟ್ಟಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಅಮಾನತಿಗೆ ಕಾರಣ ಏನು?:ಪ್ರಸ್ತುತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಭಾರತ ವಿರುದ್ಧದ ಪಂದ್ಯದಲ್ಲಿಶ್ರೀಲಂಕಾ ಹೀನಾಯ ಸೋಲಿನ ನಂತರ ಕ್ರಿಕೆಟ್ ಅಭಿಮಾನಿಗಳು ಲಂಕಾ ಕ್ರಿಕೆಟ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿತ್ತು. ಶ್ರೀಲಂಕಾದ ಸಂಸತ್ತು ದೇಶದ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಇದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಬೆಂಬಲ ಕೂಡ ಸಿಕ್ಕಿತು. ನಂತರ ಕ್ರೀಡಾ ಸಚಿವ ರೋಶನ್ ರಣಸಿಂಗ್ ಅವರು ಶ್ರೀಲಂಕಾ ಕ್ರಿಕೆಟ್ ಆಡಳಿತವನ್ನು ವಜಾಗೊಳಿಸಿ, ಕ್ರಿಕೆಟ್ ಮಂಡಳಿಯನ್ನು ನಿಯಂತ್ರಿಸಲು ಏಳು ಸದಸ್ಯರ ಹೊಸ ಸಮಿತಿಯ ಮುಖ್ಯಸ್ಥರಾಗಿ ಅರ್ಜುನ ರಣತುಂಗ ಅವರನ್ನು ನೇಮಕ ಮಾಡಿ ಆದೇಶಿಸಿತ್ತು.