ದುಬೈ:ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ಗೆ ಐಸಿಸಿ 'ಸಾಧಾರಣಕ್ಕಿಂತ ಕಡಿಮೆ' ರೇಟ್ ನೀಡಿದೆ. ಇದಲ್ಲದೇ, ಹೊರ ಮೈದಾನದ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡದ ಹಿನ್ನೆಲೆಯಲ್ಲಿ 1 ಋಣಾತ್ಮಕ ಅಂಕ ಕೊಟ್ಟಿದೆ.
ಪಂದ್ಯದ ರೆಫ್ರಿಯಾಗಿದ್ದ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಜಾವಗಲ್ ಶ್ರೀನಾಥ್ ಅವರು ಪಿಚ್ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ ರವಾನಿಸಿದ್ದಾರೆ. ಅದರಲ್ಲಿ ಮೊದಲ ದಿನವೇ ಪಿಚ್ ಸಾಕಷ್ಟು ತಿರುವು ಪಡೆಯಿತು. ಉಭಯ ತಂಡಗಳ ಸೆಣಸಾಟಕ್ಕೆ ತಕ್ಕ ಮೈದಾನ ಇದಾಗಿರಲಿಲ್ಲ. ಬ್ಯಾಟಿಂಗ್, ಬೌಲಿಂಗ್ ನಡುವೆ ಸಮಬಲ ಸಾಧಿಸಲು ಮೈದಾನ ಯಶಸ್ವಿಯಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.