ದುಬೈ:ಗುರುವಾರ ಐಸಿಸಿ ಪ್ರಕಟಿಸಿದ ಪುರುಷರ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೊಟ್ಟ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದ ಪಾಕಿಸ್ತಾನ ನ್ಯೂಜಿಲ್ಯಾಂಡ್ ಎದುರು ಕೊನೆಯಲ್ಲಿ ಪಂದ್ಯದಲ್ಲಿ ಸೋಲುವ ಮೂಲಕ ಅಗ್ರ ಪಟ್ಟ ಕಳೆದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ತಂಡ ಈ ಮಾದರಿಯಲ್ಲಿ ಕುಸಿತ ಕಂಡಿದೆ.
ಕಿವೀಸ್ ವಿರುದ್ಧದ ಕೊನೆಯ ಪಂದ್ಯವನ್ನು ಸೋಲುವ ಮೂಲಕ ಪಾಕಿಸ್ತಾನ ಮೂರು ಅಂಕ ಕಳೆದುಕೊಂಡಿತು. ಇದರಿಂದ ಆಸ್ಟ್ರೇಲಿಯಾ ವಿಶ್ವದ ನಂಬರ್ ಒನ್ ತಂಡವಾಗಿ ಸ್ಥಾನ ಪಡೆಯಿತು. ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 118 ಅಂಕ ಪಡೆಯಿತು. ಪಾಕಿಸ್ತಾನ, 116 ಅಂಕ, ಭಾರತ 115 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ಇದಕ್ಕೂ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ 113 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದವು. ಪಾಕಿಸ್ತಾನ 112 ಅಂಕಗಳಿಂದ ಮೂರನೇ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಯಲ್ಲಿ 4-0 ಯಲ್ಲಿ ಮುನ್ನಡೆ ಪಡೆದ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿತ್ತು. ಸರಣಿಯನ್ನು 5-0 ಯಲ್ಲಿ ಜಯಿಸಿದ್ದರೆ ತಂಡ ಅಗ್ರವಾಗಿ ಉಳಿಯುತ್ತಿತ್ತು. ಆದರೆ, ಪಂದ್ಯ ಸೋತು ಸರಣಿಯನ್ನು 5-1 ರಲ್ಲಿ ಜಯಿಸಿದ ಬಳಿಕ ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆಯಿತು. ಆದರೆ, ಭಾರತ ರೇಟಿಂಗ್ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿತು.