ದುಬೈ:ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬುಧವಾರ ಐಸಿಸಿ ಬಿಡುಗಡೆ ಮಾಡಿದ ಟೆಸ್ಟ್ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನ ಮೇಲಕ್ಕೇರುವ ಮೂಲಕ ಟಾಪ್ 10 ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ, ವಿರಾಟ್ 761 ರೇಟಿಂಗ್ ಪಾಯಿಂಟ್ ಪಡೆದುಕೊಂಡು ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಟಾಪ್ 10ರೊಳಗೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಒಬ್ಬರೇ ಇದ್ದಾರೆ ಎಂಬುದು ಗಮನಾರ್ಹ. ನಾಯಕ ರೋಹಿತ್ ಶರ್ಮಾ 4 ಸ್ಥಾನ ಕುಸಿದು 14ನೇ ಸ್ಥಾನಕ್ಕೆ ಇಳಿದಿದ್ದಾರೆ. ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (508 ರೇಟಿಂಗ್) 11 ಸ್ಥಾನ ಸುಧಾರಿಸಿಕೊಂಡು 51ನೇ ಸ್ಥಾನಕ್ಕೆ ತಲುಪಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (864 ರೇಟಿಂಗ್) ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ (859 ರೇಟಿಂಗ್) ಎರಡನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 872 ರೇಟಿಂಗ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ 854 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಬೌಲರ್‌ಗಳಾದ ರವೀಂದ್ರ ಜಡೇಜಾ (774 ರೇಟಿಂಗ್‌ಗಳು) ಮತ್ತು ಜಸ್ಪ್ರೀತ್ ಬುಮ್ರಾ (767 ರೇಟಿಂಗ್‌ಗಳು) ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಏಕದಿನ ಪಂದ್ಯದಲ್ಲಿ 50 ಶತಕ ಗಳಿಸಿದ ಸಾಧನೆ:ವಿರಾಟ್ ಕೊಹ್ಲಿ 2023 ರಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ ಮತ್ತು ಅವರು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ನಲ್ಲಿ ಏಕದಿನದಲ್ಲಿ ಐವತ್ತು ಶತಕಗಳನ್ನು ಗಳಿಸಿದ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಅಲ್ಲದೆ, ಅವರು ಕಳೆದ ವರ್ಷ 50 ಓವರ್‌ಗಳ ಕ್ರಿಕೆಟ್‌ನಲ್ಲಿ 55.91 ಸರಾಸರಿಯಲ್ಲಿ ಸ್ಥಿರವಾಗಿದ್ದಾರೆ.
ಐಸಿಸಿ 2023ರ ಉದಯೋನ್ಮುಖ ಕ್ರಿಕೆಟಿಗ: ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಶ್ವಾಲ್ ಅವರು ಐಸಿಸಿ 2023 ರ ವರ್ಷದ ಉದಯೋನ್ಮುಖ ಆಟಗಾರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೈಶ್ವಾಲ್ ಜೊತೆಗೆ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ, ದಕ್ಷಿಣ ಆಫ್ರಿಕಾದ ಬೌಲರ್ ಕೋಟ್ಜಿ ಜೆರಾಲ್ಡ್ ಮತ್ತು ಶ್ರೀಲಂಕಾದ ಸ್ಪಿನ್ನರ್ ದಿಲ್ಶನ್ ಮಧುಶಂಕ ಐಸಿಸಿ ಪಟ್ಟಿಯಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ವೃತ್ತಿ ಜೀವನ: ಈ ವರ್ಷ ಅಂತಾರಾಷ್ಟ್ರೀಯ ಟೆಸ್ಟ್ ಮತ್ತು ಟಿ 20 ಮಾದರಿಯಲ್ಲಿ ಪಾದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 171 ರನ್ ಗಳಿಸಿದ್ದರು. ಜೈಸ್ವಾಲ್ 6 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಅರ್ಧ ಶತಕ ಸೇರಿದಂತೆ 288 ರನ್ ಗಳಿಸಿದರು. ಆ ಬಳಿಕ ಜೈಶ್ವಾಲ್ ಟಿ20 ಪ್ರವೇಶಿಸಿದ್ದು, ಇದುವರೆಗೆ 15 ಪಂದ್ಯಗಳನ್ನು ಆಡಿದ್ದಾರೆ. ಅವರು 33.08 ಸರಾಸರಿಯಲ್ಲಿ 430 ರನ್ ಗಳಿಸಿದರು. ಇದೇ ವೇಳೆ ಜೈಶ್ವಾಲ್ 15 ಪಂದ್ಯಗಳಲ್ಲಿ ಶತಕ ಸಾಧನೆ ಮಾಡಿದರು.
ಇದನ್ನೂ ಓದಿ:ಸಿರಾಜ್ ಮಾರಕ ಬೌಲಿಂಗ್ ದಾಳಿ; ಟೆಸ್ಟ್ ಇತಿಹಾಸದಲ್ಲೇ ಭಾರತದ ಎದುರು ಅಲ್ಪ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ಸರ್ವಪತನ