ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮಧ್ಯೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 4ನೇ ಪಂದ್ಯದಲ್ಲಿ ರನ್ ಮಳೆ ಸುರಿಯಿತು. ದಕ್ಷಿಣ ಆಫ್ರಿಕಾ 428 ರನ್ ಬಾರಿಸಿದ್ರೆ, ಶ್ರೀಲಂಕಾ ದಿಟ್ಟ ಪ್ರತಿರೋಧ ತೋರಿ 328 ರನ್ ಬಾರಿಸಿ 102 ರನ್‌ಗಳಿಂದ ಸೋಲನುಭವಿಸಿತು. ಈ ಮೂಲಕ ದಾಖಲೆಯ ಜಯದೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಹರಿಣ ತಂಡ ಶುಭಾರಂಭ ಮಾಡಿತು.
ಇದಕ್ಕೂ ಮುನ್ನ, ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್‌ಗಿಳಿದ ಹರಿಣ ಟೀಂ ಸದಸ್ಯರು ಆರಂಭದಿಂದಲೇ ಸ್ಫೋಟಕ ರನ್ ಗಳಿಕೆಗೆ ಮುಂದಾದರು. ಇದರ ಫಲವಾಗಿ ನಿಗದಿತ 50 ಓವರ್‌ಗಳಲ್ಲಿ 428 ರನ್‌ಗಳ ಬೃಹತ್ ಗುರಿ ನೀಡಿತು.
ಅಸಾಧಾರಣ ಗುರಿ ಬೆನ್ನಟ್ಟಿದ ಸಿಂಹಳೀಯರು ಕೂಡ ಪೈಪೋಟಿ ನೀಡುವ ಸೂಚನೆ ನೀಡಿದರು. ಆರಂಭಿಕರು ಬೇಗನೆ ಕುಸಿದರೂ ಕುಶಾಲ್ ಮೆಂಡಿಸ್ 76, ಚರಿತ ಅಸಲಂಕಾ 79, ಮತ್ತು ದಸುನ್ ಶನಕಾ 68 ರನ್ ಬಾರಿಸಿದರು. ಆದರೆ, ಅಂತಿಮವಾಗಿ ತಂಡ 44.5 ಓವರ್‌ಗಳಲ್ಲಿ 326 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾ ರನ್ ಸುರಿಮಳೆ:ವಿಶ್ವಕಪ್ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಪೇರಿಸಿತು. ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ಟೆಂಬಾ ಬವುಮಾ ಬಳಗ ರನ್ ಶಿಖರವನ್ನೇ ನಿರ್ಮಿಸಿತು.
ಆರಂಭಿಕರಾದ ಕ್ವಿಂಟನ್ ಡಿ ಕಾಕ್ (100), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (108) ಮತ್ತು ಐಡೆನ್ ಮಾರ್ಕ್ರಾಮ್ (106) ಭರ್ಜರಿ ಶತಕ ಸಿಡಿಸಿ ತಂಡದ ಮೊತ್ತವನ್ನು 428 ಗಡಿಗೆ ತಂದು ನಿಲ್ಲಿಸಿದರು. ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಮೊತ್ತವಾಗಿದೆ.
ಟೆಂಬಾ ಬವುಮಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಈ ಆಘಾತದಿಂದ ಚೇತರಿಸಿಕೊಂಡ ಹರಿಣಗಳು, ಬಳಿಕ ರನ್‌ಗಳ ಕೋಟೆಯನ್ನೇ ಕಟ್ಟಿದರು. ಎರಡನೇ ವಿಕೆಟ್‌ಗೆ ಜೊತೆಯಾದ ಕ್ವಿಂಟನ್ ಡಿ ಕಾಕ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ನಿರೀಕ್ಷೆಗೂ ಮೀರಿ ತಂಡಕ್ಕೆ ಬಲ ತಂದುಕೊಟ್ಟರು. ಲಂಕಾ ಬೌಲರ್ಗಳನ್ನು ಚೆಂಡಾಡಿದ ಈ ದಾಂಡಿಗರು ಕೆಲ ನಿಮಿಷಗಳಲ್ಲೇ ದ್ವಿಶತಕದ ಜೊತೆಯಾಟವನ್ನೂ ಪೂರೈಸಿದರು. 84 ಎಸೆತಗಳನ್ನು ಎದುರಿಸಿದ ಕ್ವಿಂಟನ್ ಡಿ ಕಾಕ್, ಭರ್ಜರಿ 3 ಸಿಕ್ಸ್, 12 ಬೌಂಡರಿಗೊಂದಿಗೆ 100 ರನ್ ಗಳಿಸಿ ಧನಂಜಯ ಡಿ ಸಿಲ್ವಾಗೆ ಕ್ಯಾಚಿತ್ತು ತಮ್ಮ ಆಟ ಕೊನೆಗೊಳಿಸಿದರೆ, 110 ಎಸೆತಗಳನ್ನು ಎದುರಿಸಿದ ಡಸ್ಸೆನ್, ಭರ್ಜರಿ 2 ಸಿಕ್ಸ್, 13 ಬೌಂಡರಿಗಳ ಸಹಿತ 108 ರನ್ ಕಲೆ ಹಾಕಿ ತಂಡಕ್ಕೆ ವರದಾನವಾದರು. ಈ ವೇಳೆ ಕ್ರೀಸ್‌ನಲ್ಲಿ ಒಂದಾದ ಮರ್ಕ್ರಾಮ್ ಮತ್ತು ಕ್ಲಾಸೆನ್ ಮೈದಾನದಲ್ಲಿ ಮತ್ತಷ್ಟು ರನ್‌ಗಳ ಸುರಿಮಳೆಗರೆದರು. ಕೇವಲ 54 ಎಸೆತಗಳನ್ನು ಎದುರಿಸಿದ ಮರ್ಕ್ರಾಮ್, ಭರ್ಜರಿ 3 ಸಿಕ್ಸ್, 14 ಬೌಂಡರಿಗೊಂದಿಗೆ 106 ರನ್ ಗಳಿದರು.