ಪ್ರಸ್ತುತ ಭಾರತ ಕ್ರಿಕೆಟಿಗರು ಲೀಗ್ ಪಂದ್ಯದಲ್ಲಿ ಆಡುತ್ತಿದ್ದರೂ ಐಸಿಸಿ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. ಇಂದು (ಬುಧವಾರ) ಐಸಿಸಿ ಶ್ರೇಯಾಂಕ ಪಟ್ಟಿ ನವೀಕರಿಸಿದೆ. ಗಿಲ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನಕ್ಕೇರಿದ್ದು, ಇದು ಅವರ ವೃತ್ತಿಜೀವನದ ಅತ್ಯುತ್ತಮ ಸ್ಥಾನವಾಗಿದೆ. ಗಿಲ್ 738 ಅಂಕಗಳನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನದ ಇಮಾಮ್-ಉಲ್-ಹಕ್ ಅವರಿಗಿಂತ ಕೇವಲ 2 ಅಂಕ ಕಡಿಮೆ ಇದ್ದಾರೆ.
ಬ್ಯಾಟಿಂಗ್ ಪಟ್ಟಿಯಲ್ಲಿ ಕ್ವಿಂಟನ್ ಡಿ ಕಾಕ್ ನಂ. 4 ರಿಂದ 7 ನೇ ಸ್ಥಾನಕ್ಕೆ ಕುಸಿತದೊಂದಿಗೆ ಶುಭಮನ್ ಗಿಲ್ ಅವರಿಗೆ ಏರಿಕೆ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಅವರ ಕುಸಿತದಿಂದ ವಿರಾಟ್ ಕೊಹ್ಲಿ ಸಹ ಒಂದು ಸ್ಥಾನದ ಏರಿಕೆ ಕಂಡಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಡೇವಿಡ್ ವಾರ್ನರ್ 5ಕ್ಕೆ ಜಾರಿದ್ದಾರೆ.
ಮಾರ್ಚ್‌ನಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 2-1 ರಿಂದ ಸೋಲು ಕಂಡಿತ್ತು. ಗಿಲ್ ಮೂರು ಏಕದಿನ ಪಂದ್ಯಗಳಿಂದ 57 ರನ್ ಗಳಿಸಿದ್ದರು. ಆದರೆ ಈ ವರ್ಷ ಏಕದಿನದಲ್ಲಿ 3 ಶತಕ ಗಳಿಸಿದ್ದು ಅವರನ್ನು ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಐದು ಸ್ಥಾನದೊಳಗೆ ತಂದು ಕೂರಿಸಿದೆ. ಕೊಹ್ಲಿ ಪ್ರಸಕ್ತ ವರ್ಷದಲ್ಲಿ ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು ಅರ್ಧಶತಕ ಸೇರಿದಂತೆ 427 ರನ್ ಗಳಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ 8ನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿರುವುದರಿಂದ ಭಾರತ ಅಗ್ರ 10ರಲ್ಲಿ 3 ಬ್ಯಾಟರ್ಗಳನ್ನು ಹೊಂದಿದೆ.