ದುಬೈ: ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ 158 ರನ್ಗಳಿಸಿದ್ದ ಅವರು, 8 ರೇಟಿಂಗ್ ಅಂಕವನ್ನು ಹೆಚ್ಚಿಸಿಕೊಂಡಿದ್ದು, ವೃತ್ತಿ ಜೀವನದ ಗರಿಷ್ಠ ರೇಟಿಂಗ್ ಪಾಯಿಂಟ್ ಸಂಪಾದಿಸಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ನ್ಯೂಜಿಲ್ಯಾಂಡ್ನ ಟ್ರೆಂಟ್ ಬೌಲ್ಟ್, ಬಾಂಗ್ಲಾದೇಶದ ಮೆಹಿದಿ ಹಸನ್, ಅಫ್ಘಾನಿಸ್ತಾನ ಮುಜೀಬ್ ಅಗ್ರ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ 6ನೇ ಸ್ಥಾನ ಪಡೆದಿದ್ದಾರೆ.
ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಲೆನ್ ಭಾರಿ ಏರಿಕೆ
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ ಫ್ಯಾಬಿಯನ್ ಅಲೆನ್ ಬೌಲಿಂಗ್ ಶ್ರೇಯಾಂಕದಲ್ಲಿ ಬರೋಬ್ಬರಿ 16 ಸ್ಥಾನ ಏರಿಕೆ ಕಂಡಿದ್ದು, ಇದೇ ಮೊದಲ ಬಾರಿಗೆ ಅಗ್ರ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.