ಹೈದರಾಬಾದ್: 2023ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು, ತಂಡದ ಆಟಗಾರರ ನಡುವೆ ಶ್ರೇಯಾಂಕದ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಸ್ಪರ್ಧೆ ಈಗ ಕಿಂಗ್ ವಿರಾಟ್ ಕೊಹ್ಲಿ ಮತ್ತು ಪ್ರಿನ್ಸ್ ಶುಭಮನ್ ಗಿಲ್ ನಡುವೆ ನಡೆಯುತ್ತಿದೆ. ವಿಶ್ವಕಪ್ನ ಐದು ಇನ್ನಿಂಗ್ಸ್ನಲ್ಲಿ ವಿರಾಟ್ ಕೇವಲ ಒಂದರಲ್ಲಿ ವಿಫಲರಾಗಿದ್ದಾರೆ. ಉಳಿದೆಲ್ಲಾ ಪಂದ್ಯಗಳಲ್ಲಿ ಅವರು ರನ್ ಗಳಿಸಿದ್ದಾರೆ. ಇದರಿಂದ 9ನೇ ಸ್ಥಾನದಲ್ಲಿದ್ದ ವಿರಾಟ್ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಜ್ವರದಿಂದ ಚೇತರಿಸಿಕೊಂಡ ಗಿಲ್ ಒಂದು ದೊಡ್ಡ ಇನ್ನಿಂಗ್ಸ್ ಆಡಿದಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ವಿಶ್ವಕಪ್ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಅವರ ಅಗ್ರ ಪಟ್ಟ ಅಲುಗಾಡುತ್ತಿದೆ. ವಿಶ್ವಕಪ್ಗೂ ಮುನ್ನವೇ ತಂಡ ನಂ.1 ಸ್ಥಾನವನ್ನು ಕಳೆದುಕೊಂಡಿತ್ತು. ಅಲ್ಲದೇ ಮೂವರು ಪಾಕ್ ಆಟಗಾರರು ಟಾಪ್ 5 ಸ್ಥಾನದಲ್ಲಿ ಇದ್ದರು. ಆದರೆ ಏಷ್ಯಾಕಪ್ ಮತ್ತು ವಿಶ್ವಕಪ್ನ ಕಳಪೆ ಪ್ರದರ್ಶನದಿಂದ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಬಾಬರ್ ಅಜಮ್ ವಿಶ್ವಕಪ್ನ ಐದು ಇನ್ನಿಂಗ್ಸ್ನಿಂದ ಕೇವಲ 156 ರನ್ ಗಳಿಸಿದ್ದಾರೆ. ಅದರಲ್ಲಿ ಅಫ್ಗಾನ್ ವಿರುದ್ಧ 74 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿದೆ.
ಗಿಲ್ ಜೊತೆ ಕೊಹ್ಲಿ ಪೈಪೋಟಿ: ಜ್ವರದಿಂದ ಚೇತರಿಸಿಕೊಂಡ ವಿಶ್ವಕಪ್ ತಂಡಕ್ಕೆ ಮರಳಿದ ಶುಭಮನ್ ಗಿಲ್ ಫಾರ್ಮ್ನಲ್ಲಿ ಕಂಡರೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಮೂರು ಇನ್ನಿಂಗ್ಸ್ನಲ್ಲಿ ಗಿಲ್ ಒಂದು ಅರ್ಧಶತಕ ಸಹಿತ 95 ರನ್ ಅಷ್ಟೇ ಕಲೆ ಹಾಕಿದ್ದಾರೆ. ಹೀಗಾಗಿ ಬಾಬರ್ ಅವರಿಂದ ಕೇವಲ 6 ಪಾಯಿಂಟ್ಗಳಿಂದ ಹಿಂದಿದ್ದಾರೆ. ಗಿಲ್ ಒಂದು ಶತಕದ ಇನ್ನಿಂಗ್ಸ್ ಆಡಿದಲ್ಲಿ ನಂ.1 ಪಟ್ಟವನ್ನು ಅಲಂಕರಿಸಲಿದ್ದಾರೆ.