ನವದೆಹಲಿ: ಭಾರತ ಆತಿಥ್ಯದ 2023ರ ವಿಶ್ವಕಪ್ ಕ್ರಿಕೆಟ್ಗೆ ಸಚಿನ್ ತೆಂಡೂಲ್ಕರ್ ಅವರನ್ನು ಜಾಗತಿಕ ರಾಯಭಾರಿಯಾಗಿ ಹೆಸರಿಸಲಾಗಿದೆ. ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ಅವರಿಗೆ ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಶೇಷ ಗೌರವ ನೀಡಿದೆ. ಈ ಹಿಂದೆ ಸಚಿನ್, 2013 ಮತ್ತು 2015 ವಿಶ್ವಕಪ್ನ ಅಂಬಾಸಿಡರ್ ಆಗಿ ನೇಮಕವಾಗಿದ್ದರು. ಉದ್ಘಾಟನಾ ಪಂದ್ಯದ ವೇಳೆ ಸಚಿನ್ ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ತರಲಿದ್ದಾರೆ. ಹಾಗೆಯೇ ವಿಶ್ವಕಪ್‌ಗೆ ಚಾಲನೆಯನ್ನೂ ನೀಡಲಿದ್ದಾರೆ.
"1987ರಲ್ಲಿ ಬಾಲ್ ಬಾಯ್ ಆಗಿ, ಆರು ಆವೃತ್ತಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ ನನ್ನ ಹೃದಯದಲ್ಲಿ ವಿಶ್ವಕಪ್‌ಗೆ ಯಾವಾಗಲೂ ವಿಶೇಷ ಸ್ಥಾನವಿದೆ. 2011ರಲ್ಲಿ ವಿಶ್ವಕಪ್ ಗೆದ್ದಿರುವುದು ನನ್ನ ಕ್ರಿಕೆಟ್ ಪ್ರಯಾಣದ ಹೆಮ್ಮೆಯ ಕ್ಷಣ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಹಲವು ತಂಡಗಳು ಮತ್ತು ಆಟಗಾರರು ಕಠಿಣ ಪೈಪೋಟಿಗೆ ಸಿದ್ಧವಾಗಿರುವುದರಿಂದ ಪಂದ್ಯಾವಳಿ ನೋಡಲು ಉತ್ಸುಕನಾಗಿದ್ದೇನೆ. ವಿಶ್ವಕಪ್‌ನಂತಹ ಮಹತ್ವದ ಘಟನೆಗಳು ಯುವ ಮನಸ್ಸಿನಲ್ಲಿ ಕನಸು ಬಿತ್ತುತ್ತವೆ. ಈ ಆವೃತ್ತಿಯು ಯುವತಿಯರಿಗೂ ಸ್ಫೂರ್ತಿ ನೀಡುತ್ತದೆ" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸಚಿನ್ ಜೊತೆಗೆ ಐಸಿಸಿ ರಾಯಭಾರಿಗಳಾಗಿರುವ ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ನ್ಯೂಜಿಲೆಂಡ್ ರಾಸ್ ಟೇಲರ್, ಭಾರತದ ಸುರೇಶ್ ರೈನಾ, ಮಿಥಾಲಿ ರಾಜ್ ಮತ್ತು ಪಾಕಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಈ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ.