ನವದೆಹಲಿ:ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಟೆಸ್ಟ್ ಆಟಗಾರರ ಇತ್ತೀಚಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಅಗ್ರಸ್ಥಾನ ಅಲಂಕರಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಮುಕ್ತಾಯದ ಬಳಿಕ ಬಿಡುಗಡೆಗೊಂಡಿದ್ದ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಬುಶೇನ್ ನಂಬರ್ 1 ಸ್ಥಾನಕ್ಕೇರಿದ್ದರು. ಇದೀಗ ನಿನ್ನೆ ಬಿಡುಗಡೆಗೊಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜೋ ರೂಟ್ 5 ಸ್ಥಾನ ಜಿಗಿತಗೊಂಡು ಆಸೀಸ್ನ ಲಬುಶೇನ್ ಹಿಂದಿಕ್ಕೆ ಟೆಸ್ಟ್ನ ಅಗ್ರ ಬ್ಯಾಟರ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಆ್ಯಶಸ್ನ ಮೊದಲ ಟೆಸ್ಟ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ ರೂಟ್ ತಮ್ಮ 30ನೇ ಶತಕವನ್ನು ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲೂ ಅವರು 46 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ಅಗ್ರ ಸ್ಥಾನದಲ್ಲಿದ್ದ ಆಸೀಸ್ ಬ್ಯಾಟರ್ ಲಬುಶೆನ್ ಮೊದಲ ಇನ್ನಿಂಗ್ಸ್‌ನಲ್ಲಿ 0 ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 13 ರನ್‌ಗಳ ಗಳಿಸಿದ್ದರು. ಇದೀಗ ಲುಬುಶೇನ್ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಈ ಹಿಂದಿನ ಶ್ರೇಯಾಂಕ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಹೊಸ ಪಟ್ಟಿಯಲ್ಲಿ ಸ್ಮಿತ್ ಆರನೇ ಸ್ಥಾನಕ್ಕೆ ಕುಸಿದಿದ್ದು, ಟ್ರಾವಿಸ್ ಹೆಡ್ ಒಂದು ಸ್ಥಾನ ಕುಸಿತದಿಂದ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ನ್ಯೂಜಿಲ್ಯಾಂಡ್ನ ಬ್ಯಾಟರ್ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆ್ಯಶಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 141 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 65 ರನ್‌ಗಳನ್ನು ಕಲೆ ಹಾಕಿದ್ದ ಆಸ್ಟ್ರೇಲಿಯಾ ಬ್ಯಾಟರ್ ಉಸ್ಮಾನ್ ಖವಾಜಾ, ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಬಂದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಟಾಪ್ 10 ರಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಆರ್ ಅಶ್ವಿನ್:ಹೊಸ ಶ್ರೇಯಾಂಕ ಪಟ್ಟಿಯಲ್ಲೂ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆರ್ ಅಶ್ವಿನ್ ನಂಬರ್ 1 ಸ್ಥಾನ ಕಾಯ್ದುಕೊಂಡಿದ್ದಾರೆ. ಬರ್ಮಿಂಗ್‌ಹ್ಯಾಮ್ ಆ್ಯಶಸ್ ಮೊದಲ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ಇಂಗ್ಲೆಂಡ್ ವೇಗದ ಬೌಲರ್ ಒಲಿ ರಾಬಿನ್ಸನ್ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಜೇಮ್ಸ್ ಆಂಡರ್ಸನ್ ಎರಡನೇ ಮತ್ತು ಸ್ಟುವರ್ಟ್ ಬ್ರಾಡ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದರೂ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ ನಾಥನ್ ಲಿಯಾನ್ ಒಂದು ಸ್ಥಾನ ಮೇಲೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಎಂಟು ಮತ್ತು ಒಂಬತ್ತನೆ ಸ್ಥಾನದಲ್ಲಿ ಕ್ರಮವಾಗಿ ವೇಗಿ ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಜಡೇಜಾ ನಂಬರ್ 1:ಟೆಸ್ಟ್ ಅಗ್ರ ಅಲ್ರೌಂಡರ್ ಆಗಿ ಜಡೇಜಾ ಮುಂದುವರೆದಿದ್ದಾರೆ. ಎರಡನೇ ಸ್ಥಾನದಲ್ಲಿ ಆರ್ ಅಶ್ವೀನ್, ಮತ್ತು ನಾಲ್ಕನೇ ಸ್ಥಾನದಲ್ಲಿ ಅಕ್ಷರ್ ಪಟೇಲ್ ಮುಂದುವರೆದಿದ್ದಾರೆ.
ಇದನ್ನೂ ಓದಿ:SAFF Championship: ನಾಯಕ ಚೆಟ್ರಿ ಹ್ಯಾಟ್ರಿಕ್ ಗೋಲು; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ