ದುಬೈ :ಟಿ 20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡಿಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿಯೇ ಹೊಸದೊಂದು ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಟಿ-20 ವಿಶ್ವಕಪ್ನಲ್ಲಿ ವಿಂಡೀಸ್ ವಿರುದ್ಧ ಮೊದಲ ಜಯ ಸಾಧಿಸಿದೆ.
55 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ್ದ ಮೊರ್ಗನ್ ಪಡೆ ಕೇವಲ 8.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಬಟ್ಲರ್ ಅಜೇಯ 24 ರನ್ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಇನ್ನುಳಿದಂತೆ ರಾಯ್ (11), ಬೈರ್ಸ್ಟೋವ್ (9), ಅಲಿ (3), ಲಿವಿಂಗ್ಸ್ಟೋನ್(1) ಹಾಗೂ ನಾಯಕ ಮೋರ್ಗನ್ ಅಜೇಯ 7 ರನ್ಗಳಿಸಿದರು. ಇನ್ನು ವಿಂಡೀಸ್ ಪರ ಅಕಿಲ್ ಹೊಸೈನ್ 2ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ವಿಂಡೀಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಆಗಿ ಕಣಕ್ಕಿಳಿದ ಎವಿನ್ ಲೂಯಿಸ್ ಮತ್ತು ಸಿಮನ್ಸ್ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ಎಡವಿತು.
ಎವಿನ್ ಲೂಯಿಸ್ ಕೇವಲ 6 ರನ್ಗಳಿಸಿ ವೋಕ್ಸ್ಗೆ ವಿಕೆಟ್ ಒಪ್ಪಿಸಿದರೆ, ಇತ್ತ ಸಿಮನ್ಸ್ ಕೇವಲ 3 ರನ್ಗೆ ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ (13), ಶಿಮ್ರಾನ್ ಹೆಟ್ಮಾಯರ್ (9), ಬ್ರಾವೋ (5), ಪೂರನ್ (1), ನಾಯಕ ಪೋಲಾರ್ಡ್ (6), ರಸೇಲ್ (0), ಮೆಕಾಯ್(0), ರವಿ ರಾಂಪಾಲ್ (3) ರನ್ ಗಳಿಸಿ ಔಟಾದರು.
ಕ್ರಿಸ್ ಗೇಲ್ ಗಳಿಸಿದ 13 ರನ್ ವಿಂಡೀಸ್ ಆಟಗಾರರು ಗಳಿಸಿದ ಅತ್ಯಧಿಕ ರನ್ ಆಗಿದೆ. ಗೇಲ್ ಬಿಟ್ಟರೆ ಬೇರೆ ಯಾವುದೇ ಆಟಗಾರರು ಎರಡಂಕಿ ಮೊತ್ತ ದಾಟಲಿಲ್ಲ. ಇಂಗ್ಲೆಂಡ್ ಉತ್ತಮ ಬೌಲಿಂಗ್ ದಾಳಿ ನಡೆಸಿದೆ. ಆದಿಲ್ ರಶೀದ್ 4 ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ಮೋಯಿನ್ ಅಲಿ 2, ಮಿಲ್ಸ್ 2 ವಿಕೆಟ್ ಪಡೆದು ವಿಂಡೀಸ್ ಪಡೆಯನ್ನ ಕಟ್ಟಿ ಹಾಕಿದರು.