ದುಬೈ: ವಿಶ್ವಕಪ್ನ 15 ಪಂದ್ಯಗಳು ಮುಗಿದಿದ್ದು, ತಂಡಗಳು ತಲಾ ಎರಡು ಪಂದ್ಯಗಳನ್ನು ಪೂರ್ಣಗೊಳಿಸಿ, ಮೂರನೇ ಪಂದ್ಯಗಳನ್ನು ಆಡುತ್ತಿವೆ. ಈ ಹಂತದಲ್ಲಿ ಐಸಿಸಿ ಏಕದಿನ ಶ್ರೇಯಾಂಕವನ್ನು ನವೀಕರಿಸಿದ್ದು, ಭಾರತ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶ್ರೇಯಾಂಕದಲ್ಲಿ ಏರಿಕೆ ಆಗಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತು ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಸ್ಥಾನದಲ್ಲೂ ಏರಿಕೆ ಕಂಡಿದೆ.
ತಂಡದ ಶ್ರೇಯಾಂಕದಲ್ಲಿ ವಿಶ್ವಕಪ್ಗೂ ಒಂದು ತಿಂಗಳ ಮೊದಲು ಅಗ್ರಸ್ಥಾನದಲ್ಲಿದ್ದು ಬೀಗುತ್ತಿದ್ದ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದರೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದ ಭಾರತ ತಂಡ ವಿಶ್ವಕಪ್ನ ಹ್ಯಾಟ್ರಿಕ್ ಗೆಲುವಿನ ಪರಿಣಾಮ ನಂ.1 ಪಟ್ಟವನ್ನು ಉಳಿಸಿಕೊಂಡಿದೆ.
2019ರ ವಿಶ್ವಕಪ್ನ ಟಾಪ್ ರನ್ ಸ್ಕೋರರ್ ಆಗಿದ್ದ ರೋಹಿತ್ ಶರ್ಮಾ ಐಸಿಸಿ ಈವೆಂಟ್ನ ತಮ್ಮ ಬ್ಯಾಟಿಂಗ್ ಛಾಪನ್ನು ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೂ ನಂತರದ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ನಂತರದ ಎರಡು ಇನ್ನಿಂಗ್ಸ್ನಲ್ಲಿ 131 ಮತ್ತು 86ರನ್ ಉತ್ತಮ ಪ್ರದರ್ಶನ ನೀಡಿದ್ದು, ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 11 ರಿಂದ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ರೋಹಿತ್ ಶರ್ಮಾ ತಮ್ಮ ಫಾರ್ಮ್ನ್ನು ಹೀಗೆ ಮುಂದುವರೆಸಿದಲ್ಲಿ ಅಗ್ರಸ್ಥಾನಕ್ಕೆ ಪೈಪೋಟಿ ನೀಡುವ ಎಲ್ಲ ಸಾಧ್ಯತೆಗಳು ಇವೆ. ವಿರಾಟ್ ಕೊಹ್ಲಿ ಮೂರು ಇನ್ನಿಂಗ್ಸ್ನಲ್ಲಿ ಎರಡು ಅರ್ಧಶತಕದ ಗಳಿಸಿದ್ದು, ಡೇವಿಡ್ ಮಲಾನ್ ಜೊತೆಗೆ 8ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಉಳಿದಂತೆ ಭಾರತದ ಯುವ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಪಾಕ್ ನಾಯಕ ಬಾಬರ್ ಅಜಮ್ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಗಿಲ್ ಮತ್ತು ಬಾಬರ್ ನಡುವೆ 18 ರೇಟಿಂಗ್ನ ವ್ಯತ್ಯಾಸವಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಪಾಕ್ ಬ್ಯಾಟರ್ ಇಮಾಮ್ ಉಲ್ ಹಕ್ 10ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.